-ಅಶಿರುದ್ಧೀನ್ ಅಲಿಯಾ, ಅಧ್ಯಾಪಕರು, ಸ್ನೇಹ ಪಬ್ಲಿಕ್ ಸ್ಕೂಲ್ ಪಕ್ಕಲಡ್ಕ

ವಿಶ್ವ ಸಾಹಿತ್ಯ ರಂಗದಲ್ಲಿ ಕಥೆ, ಕವನ, ಕಾದಂಬರಿಯಲ್ಲಿ ತನ್ನದೇ ಛಾಪು ಮೂಡಿಸಿ ಜನ ಮಾನಸದಲ್ಲಿ ಸಾಹಿತ್ಯ ಅಭಿರುಚಿಯನ್ನು ಸವಿಸಿದ ಪ್ರಮುಖ ಲೇಖಕಿ ‘ಮಾಧವಿ ಕುಟ್ಟಿ’ ಅಥವಾ ‘ಕಮಲಾದಾಸ್’ ಅಥವಾ ‘ಕಮಲಾ ಸುರಯ್ಯ’. ನಮ್ಮನ್ನಗಲಿ ವರ್ಷಗಳೇ ಸಂದವು. ಮನುಷ್ಯ ಸಂಬಂಧಗಳು, ಅವರ ಸೂಕ್ಷ್ಮ ಮನೋವೇದನೆಗಳು, ಮನಸ್ಸಿನೊಳಗಿನ ನಿಗೂಢತೆಗಳ ಮೇಲೆ ಬೆಳಕು ಚೆಲ್ಲುವ ಮತ್ತು ಲೈಂಗಿಕ ತೃಪ್ತಿಯಿಂದ ನರಳುವ ಹೆಂಗಳೆಯರ ಮನಸ್ಸಿನ ನರಲಾಟವನ್ನು ಹಸಿಯಾಗಿ ಬಿತ್ತಿಸಿ, ಬರವಣಿಗೆಯಿಂದಲೇ ಪ್ರಸಿದ್ಧಿಗೊಂಡು ವಿವಾದಕ್ಕೂ ನಾಂದಿ ಹಾಡಿದ್ದರು. ತನ್ನ ಹದಿನೈದನೇ ವಯಸ್ಸಿಗೆ ವಿವಾಹವಾಗಿ ವೈವಾಹಿಕ ಬದುಕು ಆರಂಭಿಸಿದ್ದರು. ವಿವಾಹದಿಂದ ಮರಣದ ವರೆಗೆ ಕಮಲಾದಾಸ್ ಎದುರಿಸಿದ ವಿವಾದಗಳು, ಹೀಯ್ಯಾಳಿಕೆಗಳು, ವೇದನೆಗಳು ಅಷ್ಟಿಷ್ಟಲ್ಲ. ಹಲವು ವಿಷಯಗಳನ್ನು ತನ್ನ ಕಥೆಗಳಿಂದಲೂ, ಕವನಗಳಿಂದಲೂ, ಕಾದಂಬರಿಗಳಿಂದಲೂ ಓದುಗರಲ್ಲಿ ಹಂಚಿ ಬಿಟ್ಟಿದ್ದರು.

ಕೇರಳದ ಪ್ರಖ್ಯಾತ ಸಿನೆಮಾ ನಿರ್ದೇಶಕ ಕಮಲ್ ಇವುಗಳನ್ನು ಮುಂದಿಟ್ಟು, ಪ್ರಖ್ಯಾತ ನಟಿ ಮಂಜುವಾರಿಯರ್ ನಟನೆಯಲ್ಲಿ ‘ಆಮಿ’ ಎಂಬಂತಹ ಕಮಲಾದಾಸ್ ಜೀವನ ಚರಿತ್ರೆಯ ಪುಸ್ತಕವಾದ ‘ಎಂಡೆ ಕಥಾ’ ಆಧಾರಿತ ಚಿತ್ರವೊಂದನ್ನು ನಿರ್ಮಿಸಿ, ಬಿಡುಗಡೆಗೊಂಡು ಸಣ್ಣದೊಂದು ವಿವಾದವನ್ನು ಉಂಟು ಮಾಡಿದ್ದು ವಿಶೇಷ. ಕಮಲಾದಾಸ್ ಬಾಲ್ಯ, ವಿವಾಹ ಜೀವನ, ಬರಹ ಮತ್ತು ಮುಂತಾದವನ್ನು ಪ್ರಮುಖವಾಗಿಸಿ ಸಿನೆಮಾ ನಿರ್ಮಿಸಲಾಗಿದೆ. ಶ್ರೇಯಾ ಘೋಶಾಲ್, ವಿಜಯ್ ಏಶುದಾಸ್, ಜಾವೇದ್ ಅಲಿಯ ಕಂಠದಿಂದ ಉತ್ತಮ ಹಾಡುಗಳು ಹೊರಹೊಮ್ಮಿದೆ. ಕಮಲಾ ಸುರಯ್ಯರನ್ನು ಅರಿಯುವವರಿಗೆ ಅವರ ಸಾಹಿತ್ಯ ಅಭಿರುಚಿಯನ್ನು ಪಡೆದವರಿಗೆ ಈ ಸಿನೆಮಾ ಸ್ವಲ್ಪ ವಿಶೇಷ ಎನಿಸಬಹುದು. “ನೀರ್ಮಾರ್ತಲ ಹೂವು ಬಿಟ್ಟಕಾಲ” ಕೃತಿಯು ಹಲವು ಸನ್ನಿವೇಶಗಳು ನಮ್ಮನ್ನು ರಂಜಿಸಬಹುದು. ಮಹಿಳಾ ಸ್ವಾತಂತ್ರ್ಯ, ಬಾಲ್ಯ ವಿವಾಹದಿಂದ ಧ್ವಂಸಗೊಳ್ಳುವ ಕನಸುಗಳ ಬಗ್ಗೆಯೂ ಸಿನೆಮಾ ಪ್ರಸ್ತಾಪವೆತ್ತುತ್ತದೆ. ಹೆಣ್ಣಿಗೆ ಹೇಳಿಕೊಳ್ಳಲಾಗದ ಮನದಾಳದ ಭಾವನೆಯ ಬಗ್ಗೆಯು ಸಿನೆಮಾ ವಿವರಿಸುತ್ತದೆ.

ಕಮಲಾದಾಸ್ ಕಮಲಾ ಸುರಯ್ಯಳಾಗುವ ಸನ್ನಿವೇಶವನ್ನು ಕೋಮುವಾದಿ ದೃಷ್ಟಿಕೋನದಿಂದ ಚಿತ್ರಿಸಲಾಗಿದೆ ಎಂಬ ಸಂಶಯವು ಸಮಾನ ಮನಸ್ಕ ಪ್ರೇಕ್ಷಕರಲ್ಲಿ ಹುಟ್ಟದಿರಲು ಸಾಧ್ಯವಿಲ್ಲ. ಕಮಲಾದಾಸ್ ಮತಾಂತರಗೊಳ್ಳಲು ಕಾರಣನಾದ ಅಕ್ಬರ್ ಅಲಿ, ಜನರು ತನ್ನನ್ನು ವಿರೋಧಿಸಿದಾಗ ನನ್ನಿಂದ ದೂರವಾಗಿ ಸ್ವತಃ ತನ್ನನ್ನು ರಕ್ಷಿಸಿಕೊಂಡ. ಆಗಿನ ಕಾಲದಲ್ಲಿ ಕಮಲಾದಾಸ್ ‘ಲವ್ ಜಿಹಾದಿ’ಗೆ ಬಲಿಯಾದವಳು ಎಂಬ ಹೊಸ ವಿವಾದವು ಹುಟ್ಟಿದ್ದವು. ಅಕ್ಬರ್ ಅಲಿಯ ಅಂದದ ವಿಶೇಷ ಆಕರ್ಷಣೆ, ಪ್ರೇಮ, ಅನುಕಂಪ ಮೂಲಕವೇ ಕಮಲಾ ಸುರಯ್ಯ ಇಸ್ಲಾಮಿಗೆ ಮತಾಂತರಗೊಳ್ಳಲು ಕಾರಣ ಎಂಬ ವಾದವು ಹಲವರಿಗಿತ್ತು. ಕಮಲಾದಾಸ್‍ಳ ಇಸ್ಲಾಮ್ ಮತಾಂತರವು ಹೊಸ ಅಲೆಯನ್ನು ಕೇರಳದಲ್ಲಿ ಸೃಷ್ಟಿಸಿತ್ತು. ಮತಾಂತರವು ಬ್ರಾಹ್ಮಣಶಾಯಿತ್ವದ ಅಂತರಂಗವನ್ನು ಬಹಳ ಕೆರಳಿಸಿತ್ತು. ಹಲವಾರು ವಿರೋಧಗಳು ಭುಗಿಲೆದ್ದಿದ್ದವು ಎಂಬ ರಂಗವನ್ನು ಚಿತ್ರಿಸಿ ಮುಂದೆ ಮತಾಂತರಗೊಳ್ಳುವವರಿಗೆ ಎಚ್ಚರಿಸುವ ಸಣ್ಣ ಪ್ರಯತ್ನ ಮಾಡಿದ್ದು ಕೇರಳದ ಮಾಧ್ಯಮ ರಂಗದಲ್ಲಿ ಚರ್ಚಾ ವಿಷಯವಾಗಲಿಲ್ಲ. ಆದರೂ ಸಿನೆಮಾದ ಕೊನೆಯಲ್ಲಿ ತೇಪೆ ಹಚ್ಚಿದರಿಂದ ಮತಾಂತರ ರಂಗ ಅಷ್ಟೇನೂ ವಿಶೇಷವಾಗಲಿಲ್ಲ.

ಎಂಡೆ ಕತಾ, ನೀರ್ಮಾರ್ತಲ ಪ್ರತಕಾಲ, ಪಕ್ಷಿಯುಡೆ ಚಂದನ ಮರಂಗಳ್ ಮುಂತಾದ ಹಲವಾರು ಕಥಾಹಂದರಗಳನ್ನು ಸೃಷ್ಟಿಸಿ ಕೇರಳ ಸಾಹಿತ್ಯ ಮತ್ತು ವಿಶ್ವ ಸಾಹಿತ್ಯ ರಂಗದಲ್ಲಿ ಹೊಸತನವನ್ನು ನೀಡಿದ ಬರಹಗಾರ್ತಿ ಕಮಲಾದಾಸ್. 2009ರಲ್ಲಿ ಇಹಲೋಕ ತ್ಯಜಿಸಿದರು.

ಮೂಲತಃ ಕೇರಳದ ತ್ರಿಶೂರ್ ಜಿಲ್ಲೆಯ ಪುನ್ನಯರ್ ಕುಳಂ ಗ್ರಾಮದಲ್ಲಿ ನಲಪಾಡ್ ತರವಾಡಿನಲ್ಲಿ ಖ್ಯಾತ ಕವಯತ್ರಿ ಬಾಲಮ್ಮಣಿಯಮ್ಮ ಮತ್ತು ವಿ.ಎ ನಾಯರ್ ಮಗಳಾಗಿ ಜನಿಸಿದರು. ರಿಝರ್ವ್ ಬ್ಯಾಂಕ್ ಅಧಿಕಾರಿಯಾಗಿದ್ದ ಕೆ. ಮಾಧವದಾಸ್‍ರೊಂದಿಗೆ ವಿವಾಹವಾಗಿ ವೈವಾಹಿಕ ಜೀವನ ಆರಂಭಿಸಿದ್ದರು. ಏಷ್ಯನ್ ಪೋಯಟ್ರಿಕ್ ಅವಾರ್ಡ್, ಏಷ್ಯನ್ ವಲ್ರ್ಡ್ ಪ್ರೈಝ್, ಎಝುತಚ್ಚನ್ ಅವಾರ್ಡ್, ಕೇರಳ ಸಾಹಿತ್ಯ ಅವಾರ್ಡ್ ಮತ್ತು ವಿಶ್ವ ಪ್ರಸಿದ್ದ ನೊಬೆಲ್ ಅವಾರ್ಡಿಗೂ ನಾಮ ನಿರ್ದೇಶಿಸಲ್ಪಟ್ಟವರಾಗಿದ್ದರು.

 

LEAVE A REPLY

Please enter your comment!
Please enter your name here