ಪ್ರೊ.ಎಮ್.ಅಬ್ದುಲ್ ರೆಹಮಾನ್ ಪಾಷ

ಅದೃಷ್ಟದ ಬೆನ್ನು ಹತ್ತಿ ಲಕ್ಷಾಂತರ ಜನ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ; ತಾವು ಅಂದು ಕೊಂಡಿರುವ ಕೆಲಸ ಆಗದೇ ಇದ್ದರೆ, ಬರುತ್ತದೆ ಎಂದು ನಂಬಿದ್ದ ಹಣ ಬಾರದೇ ಇದ್ದರೆ, ಹೊಡೆಯುತ್ತದೆ ಎಂದು ಅಂದು ಕೊಂಡಿದ್ದ ಲಾಟರಿ ಡುಮ್ಕಿ ಹೊಡೆದರೆ, ಗೆದ್ದೇ ಗೆಲ್ಲುತ್ತದೆ ಎಂದು ಬಾಜಿ ಕಟ್ಟಿದ್ದ ಭಾರತದ ಪರವಾಗಿ ಆಡಿದ ಕ್ರಿಕೆಟ್ ಟೀಮು ಹೀನಾಯವಾಗಿ ಸೋತರೆ, ಅದಕ್ಕೆ ಸಮಂಜಸವಾದ ಕಾರಣ ಹುಡುಕಲು ಹೋಗುವುದಿಲ್ಲ. ಅದು ಕಷ್ಟ. ‘ನಮ್ಮ ಅದೃಷ್ಟ ಚೆನ್ನಾಗಿಲ್ಲ’, ‘ನಮ್ಮ ಹಣೆಯಲ್ಲಿ ಬರೆದಿಲ್ಲ’ ಎಂದು ಸಮಾಧಾನ ಮಾಡಿಕೊಳ್ಳುತ್ತೇವೆ. ಇದು ಸುಲಭ. ಆದರೆ, ಏನಿದು ಅದೃಷ್ಟ?

ಯಾವುದೇ ಸಾದಾ ನಿಘಂಟನ್ನು ತೆಗೆದು ನೋಡಿ ಗೊತ್ತಾಗುತ್ತದೆ. ‘ಅದೃಷ್ಟ’ ಎಂದರೆ ಕರ್ಮ, ವಿಧಿ, ಸುದೈವ, ಭಾಗ್ಯವಿಶೇಷ ಎಂಬ ಅರ್ಥವಿದೆ. ಈ ಮಾದರಿಯಲ್ಲಿ ಅದೃಷ್ಟವನ್ನು ಅರ್ಥ ಮಾಡಿಕೊಳ್ಳುವವರು ಅದನ್ನು ನಂಬಿ ಮೋಸಗೋಗುತ್ತಾರೆ. ನೂರಲ್ಲಿ ಒಂದು ಬಾರಿ ಗೆದ್ದರೂ ತೊಂಭತ್ತುತೊಂಭತ್ತು ಬಾರಿ ಸೋತಿದ್ದನ್ನು ಮರೆಯುತ್ತಾರೆ. ನಷ್ಟಕ್ಕೆ ಒಳಗಾಗುತ್ತಾರೆ. ಇದು ಅವರು ತಮ್ಮ ಮೌಢ್ಯಕ್ಕೆ ತೆರುವ ಬೆಲೆಯಾಗಿರುತ್ತದೆ. ಅದರೆ ನೀವು ಇನ್ನೂ ಸ್ವಲ್ಪ ಮುಂಚಕ್ಕೆ ಹೋಗಿ ನೋಡಬೇಕಾದದ್ದು ‘ದೃಷ್ಟ’ ಎಂಬ ಪದವನ್ನು. ‘ದೃಷ್ಟ’ ಎಂದರೆ, ‘ಕಣ್ಣಿಂದ ಕಂಡ, ಗ್ರಹಿಸಿದ, ತಿಳಿದುಕೊಂಡ, ಅನುಭವಕ್ಕೆ ಬಂದ’ ಎಂಬ ಅರ್ಥಗಳು ಇವೆ. ಅಷ್ಟೆ. ಅ-ದೃಷ್ಟ ಎಂಬುದು ಅದಕ್ಕೆ ವಿರುದ್ಧ ಪದ; ಎಂದರೆ ‘ಕಂಡಿಲ್ಲದ್ದು, ಗ್ರಹಿಸದೇ ಇದ್ದದ್ದು, ತಿಳಿದುಕೊಳ್ಳದೇ ಇದ್ದದ್ದು, ಅನುಭವಕ್ಕೆ ಬರದೇ ಇದ್ದದ್ದು’ ಎಂದರ್ಥ. ಇದಕ್ಕಿಂತ ಹೆಚ್ಚಿನ, ನಮಗಿಂತ ಮೇಲಿನ, ಹೊರಗಿನ ಅಥವಾ ಇನ್ನು ನಿರ್ದಿಷ್ಟವಾಗಿ ಹೇಳಬೇಕು ಎಂದರೆ, ‘ದೈವಿಕ’ವಾದ ಅರ್ಥ ಅ-ದೃಷ್ಟಕ್ಕೆ ಇಲ್ಲ. ಹೀಗೆ ತಿಳಿದುಕೊಳ್ಳುವುದು ವೈಜ್ಞಾನಿಕ ಮನೋವೃತ್ತಿ, ಮತ್ತು ಲೌಕಿಕ ಬದುಕಿನಲ್ಲಿ ಲಾಭದಾಯಕ.

ಆದಾಯಗಳಿಸುವ ಉದ್ದೇಶದಿಂದ ಯಾವುದೋ ಒಂದು ಉದ್ಯಮವನ್ನು ಸ್ಥಾಪಿಸುತ್ತೇವೆ. ಫಲಜ್ಯೋತಿಷಿಯನ್ನು ಕೇಳಿ ಒಳ್ಳೆಯ ಮುಹೂರ್ತದಲ್ಲಿ ಆರಂಭಿಸುತ್ತೇವೆ. ಅಥವಾ ಯಾವುದೋ ದರ್ಗಾಕ್ಕೆ ಭೇಟಿ ನೀಡಿ ಅಲ್ಲಿನ ಔಲಿಯಾರಿಗೆ ಹೂವಿನ ಚಾದರ್ ಒಪ್ಪಿಸಿ ಯಶಸ್ಸಿಗಾಗಿ ಬೇಡಿಕೆ ಸಲ್ಲಿಸಿ ಕೈಗೆ ದಾರವೋ ತಾಯಿತಾವೋ ಕಟ್ಟಿಸಿಕೊಂಡು ಬರುತ್ತೇವೆ. ಉದ್ಯಮ ಯಶಸ್ವಿಯಾದರೆ ಅದರ ಎಲ್ಲಾ ಶ್ರೇಯಸ್ಸನ್ನು ಮುಹೂರ್ತ, ಪೂಜೆ ಅಥವಾ ದರ್ಗಾದ ಅನುಗ್ರಹ ಪಡೆಯುತ್ತದೆ. ಅಕಸ್ಮಾತ್ ಉದ್ಯಮದಲ್ಲಿ ಸೋಲಾದರೆ ಎಲ್ಲ ದೂಷಣೆ ನಮ್ಮ ಮೇಲೆಯೇ ಹೊತ್ತುಕೊಂಡು ನಮ್ಮ ‘ಅದೃಷ್ಟ’ವನ್ನು, ಹಣೆಬರಹವನ್ನು ದೂಷಿಸಿಕೊಂಡು, ‘ಒಳ್ಳೆಯದಾಗುತ್ತೆ’ ಎಂದು ನುಡಿದಿದ್ದ ಜ್ಯೋತಿಷಿ, ದರ್ಗಾದ ಔಲಿಯಾರನ್ನು ‘ಕ್ಷಮಿಸಿ’ ಬಿಡುತ್ತೇವೆ.

SWOT ವಿಶ್ಲೇಷಣೆ

ಹೌದು, ನಾನೂ ಹೇಳುತ್ತೇನೆ. ನೀವು ಉದ್ಯಮದಲ್ಲಿ ಸೋತಿದ್ದಕ್ಕೆ ‘ಅದೃಷ್ಟ’ವೇ ಕಾರಣ. ಎಂದರೆ, ಯಾವುದೇ ಹೊಸ ಉದ್ಯಮ ಯಶಸ್ವಿಯಾಗಬೇಕು ಎಂದರೆ, ಅದನ್ನು ಆರಂಭಿಸುವ ಮುನ್ನ ಅದರ (Strength, Weaknesses, Opportunities, and Threats) ‘ಸಾಬಲ್ಯ, ದೌರ್ಬಲ್ಯ, ಅವಕಾಶ ಮತ್ತು ಅಪಾಯ’ಗಳನ್ನು ಅಧ್ಯಯನ ಮಾಡಬೇಕು ಎಂದು ವ್ಯವಹಾರ ನಿರ್ವಹಣಾ ವಿಜ್ಞಾನ ಹೇಳುತ್ತದೆ. SWOT Analysis ಎನ್ನುತ್ತೇವೆ ಅದನ್ನು. ಉದಾಹರಣೆಗೆ ನೀವು ಒಂದು ಅಗರ್‍ಬತ್ತಿ ತಯಾರಿಕೆಯ ಚಿಕ್ಕ ಉದ್ಯಮವನ್ನು ಆರಂಭಿಸಬೇಕು ಎಂದುಕೊಂಡಿದ್ದೀರಿ. ಆಗ ನೀವು ತಯಾರಿಸಬೇಕು ಎಂದುಕೊಂಡಿರುವ ಮಾದರಿಯ ಅಗರ್‍ಬತ್ತಿಯ ಉತ್ತಮಗುಣಗಳು ಏನು? ಈಗಾಗಲೇ ಇರುವ ಹಲವಾರು ಅಗರ್‍ಬತ್ತಿಗಳಿಗಿಂತ ನಿಮ್ಮದು ಹೇಗೆ ಭಿನ್ನ? ನಿಮ್ಮ ಯೋಜನೆಯಲ್ಲಿರುವ ದುರ್ಬಲ ಅಂಶಗಳೇನು? ಬಂಡವಾಳ ಕಡಿಮೆಯೇ, ಅನುಭವವಿಲ್ಲವೇ? ನಿಮ್ಮ ಅಗರ್‍ಬತ್ತಿಗೆ ಇರುವ ಇರುವ ಬೇಡಿಕೆ ಹೇಗಿದೆ? ಎಲ್ಲೆಲ್ಲಿ ಮಾರಾಟದ ಅವಕಾಶ ಇವೆಯೇ? ಅಗರ್‍ಬತ್ತಿಯ ನಿಮ್ಮ ಉದ್ಯಮದಲ್ಲಿ ಇದೀಗ ಅಥವಾ ಭವಿಷ್ಯದಲ್ಲಿ ಒದಗಿ ಬರುವ ಅಪಾಯಗಳು ಯಾವುದು? ಅದನ್ನು ನೀವೂ ಸಾಮಾನ್ಯವಾಗಿ ಮಾಡುತ್ತೀರಿ. ಈ ರೀತಿಯ ವಿಶ್ಲೇಷಣೆಯಲ್ಲಿ ನೂರಾರು ಬಿಡಿಬಿಡಿ ಅಂಶಗಳು ಒಳಗೊಂಡಿರುತ್ತವೆ. ನಿಮ್ಮ ಶಕ್ತ್ಯಾನುಸಾರ ಅಧ್ಯಯನ ಮಾಡಿದಾಗ, ನಿಮ್ಮ ಗಮನಕ್ಕೆ ಬಂದ ಅಂಶಗಳ ಕುರಿತು ನೀವು ಎಚ್ಚರಿಕೆ ವಹಿಸಿರುತ್ತೀರಿ. ಆದರೂ ಇನ್ನು ಕೆಲವು ಅಂಶಗಳನ್ನು ನೀವು ಗಮನಕ್ಕೆ ತೆಗೆದುಕೊಂಡಿರುವುದಿಲ್ಲ. ಅವು ‘ಅ-ದೃಷ್ಟ’ ಅಂಶಗಳು. ನಿಮಗೆ ಕಾಣದೇ ಇದ್ದ ಅಂಶಗಳು. ಅಂಥ ಅಂಶಗಳು ಬಹಳ ಬಹಳ ಮಹತ್ವದ್ದಲ್ಲವಾಗಿದ್ದರೆ ನಿಮ್ಮ ಯಶಸ್ಸಿಗೆ ಅವು ಅಡ್ಡಿ ಮಾಡದೇ ಇರಬಹುದು; ಆದರೆ ನಿಮಗೆ ಗೋಚರಿಸದೇ ಇದ್ದ ಆ ಅಂಶಗಳು ಬಹಳ ಮಹತ್ವದ್ದಾಗಿದ್ದರೆ, ಅವುಗಳನ್ನು ನಿಮ್ಮ ‘ಸಾಬಲ್ಯ, ದೌರ್ಬಲ್ಯ, ಅವಕಾಶ ಮತ್ತು ಅಪಾಯ’ಗಳ ವಿಶ್ಲೇಷಣೆಯಲ್ಲಿ ನೀವು ಗಮನಕ್ಕೆ ತೆಗೆದುಕೊಂಡಿಲ್ಲವಾದರೆ, ಅವು ನಿಮ್ಮ ಸೋಲಿಗೆ ಕಾರಣವಾಗಬಹುದು. ಅಂದರೆ ನಿಮ್ಮ ಸೋಲಿಗೆ, ನೀವು ಮುಂಚಿತವಾಗಿ ಕಾಣದೇ ಇದ್ದ ಇಂಥ ‘ಅದೃಷ್ಟ’ ಅಂಶಗಳು ಕಾರಣವಾಗಿರುತ್ತವೆ.

ಪರಿಹಾರವೂ ಇದೆ 

ಇದಕ್ಕೆ ಪರಿಹಾರವೇನು? ಸೋಲಿಗಾಗಿ ಇನ್ಯಾರನ್ನೋ, ನಮ್ಮ ಅದೃಷ್ಟವನ್ನೋ ದೂಷಿಸುವುದಲ್ಲ; ಪಶ್ಚಾತ್ತಾಪ ಪಡುವುದೂ ಅಲ್ಲ. ಪಾಲೋ ಕೊಯ್ಲೋ ಎಂಬ ತತ್ವಜ್ಞಾನಿ ಕಾದಂಬರಿಕಾರ ತನ್ನ ಆಲ್ಕೆಮಿಸ್ಟ್ ಎನ್ನುವ ಕಾದಂಬರಿಯಲ್ಲಿ ಹೇಳುತ್ತಾನೆ, ‘ಬದುಕಿನಲ್ಲಿ ಪಶ್ಚಾತ್ತಾಪಗಳು ಎಂಬುವು ಇಲ್ಲವೇ ಇಲ್ಲ; ಎಲ್ಲವೂ ನಾವು ಕಲಿಯುವ ಪಾಠಗಳು’ ಎಂದು. ತಪ್ಪಿನಿಂದ ಕಲಿಯುವ ಪಾಠಗಳು, ಎಂದರೆ ಅಂಥ ತಪ್ಪುಗಳನ್ನು ಮುಂದೆ ಮಾಡದೇ ಇರುವುದು. ಎಂದರೆ ನಮಗೆ ಸೋಲುಂಟಾದಾಗ ಅದಕ್ಕೆ ಕಾರಣವನ್ನು ನಾವಿರುವ, ನಿಜವಾದ ಲೋಕದಲ್ಲಿಯೇ, ಸನ್ನಿವೇಶಗಳು, ಸಂಬಂಧಗಳಲ್ಲಿಯೇ ಹುಡುಕಿಕೊಳ್ಳಬೇಕು. ಈ ತಪ್ಪು ಆಗಿರುವುದಿಲ್ಲ, ಈ ತಪ್ಪುಗಳನ್ನು ನಾವು ಮಾಡಿರುತ್ತೇವೆ. ಇವು ವಾಸ್ತವವಾದ ತಪ್ಪುಗಳು. ನಮ್ಮ ನಿಯಂತ್ರಣದಲ್ಲಿರುವ ದೋಷಗಳು. ಅರಿತಾಗ ತಿದ್ದಿಕೊಳ್ಳುವ ಸಾಧ್ಯತೆ ಇರುತ್ತದೆ. ನಮಗೆ ನಮ್ಮ ತಪ್ಪಿನಿಂದ ಪಾಠ ಕಲಿಯಲು ಸಾಧ್ಯವಾಗುತ್ತದೆ. ಅದರ ಬದಲಿಗೆ ಅಲೌಕಿಕದಲ್ಲಿ ಕಾರಣಗಳನ್ನು ಹುಡುಕಿ, ಇಲ್ಲದ ‘ಅದೃಷ್ಟ’ವನ್ನು ದೂಷಿಸಿ ಸುಮ್ಮನೇ ಕೂತರೆ, ಅಥವಾ ಇನ್ನಷ್ಟು ಫಲಜ್ಯೋತಿಷ, ವಾಸ್ತು, ಪೂಜೆ, ಪರಿಹಾರಗಳಿಗೆ ಜೋತು ಬಿದ್ದರೆ ನೀವು ಗೆಲುವು ಕಾಣುವುದು ಅನಿಶ್ಚಿತವೇ ಸರಿ. ಅನಿಶ್ಚಿತ ಮನಸ್ಸಿನವರನ್ನು ನಿರಂತರವಾಗಿ ಶೋಷಿಸಲು ಇಂಥ ನೂರಾರು ಜನರು, ಸಂಸ್ಥೆಗಳು, ಮಾಧ್ಯಮಗಳು ಹದ್ದಿನಂತೆ ಕಾಯುತ್ತಿರುತ್ತಾರೆ.

ಪರೀಕ್ಷೆಯಲ್ಲಿ ಪಾಸಾಗುವುದು, ಮನೆಯನ್ನು ಕಟ್ಟುವುದು, ಮದುವೆಯಾಗುವುದು, ಮಕ್ಕಳನ್ನು ಓದಿಸುವುದು, ನೌಕರಿ ಹುಡುಕುವುದು ಇವೆಲ್ಲವೂ ನಾವು ಬದುಕಿರುವ ವಾಸ್ತವ ಲೋಕಕ್ಕೆ ಸಂಬಂಧಿಸಿದ, ನಮಗೆ ಸಂಬಂಧಿಸಿದ ಸಮಸ್ಯೆಗಳು. ಇವುಗಳಿಗೆ ಕಾರಣಗಳೂ ಇದೇ ವಾಸ್ತವ ಲೋಕದಲ್ಲಿಯೇ ಇರುತ್ತವೆ; ಹೀಗಾಗಿ ಇವುಗಳಿಗೆ ಪರಿಹಾರವೂ ಇದೇ ಭೌತಿಕ ಜಗತ್ತಿನಲ್ಲಿ, ನಮ್ಮಿಂದಲೇ ಸಿಗಬೇಕು. ಇತರರ ನೆರವು ಬೇಕು. ಹೀಗೆ ಯಾವುದೇ ವಾಸ್ತವ ವ್ಯವಹಾರಗಳಲ್ಲಿ ನಾವು ಅದರ ‘ಆಗುಹೋಗು’ಗಳನ್ನು ಹುಡುಕಿ, ತೂಗಿ ನೋಡಿ, ಆಗುವುದಕ್ಕೆ ಕಾರಣವಾಗುವುದನ್ನು ಚೆನ್ನಾಗಿ ಅನುಸರಿಸಿ, ಆಗದೇ ಹೋಗುವುದಕ್ಕೆ ಇರುವ ಕಾರಣಗಳನ್ನು ಎಚ್ಚರಿಕೆಯಿಂದ ದೂರವಿಟ್ಟು ಮಾಡಿದರೆ ಗೆಲುವು ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ.

ಈ ಅರ್ಥದಲ್ಲಿ ನಮ್ಮ ಅ-ದೃಷ್ಟ ಎಂದರೆ ನಾವು ಕಾಣದೇ ಇರುವುದು, ನಮ್ಮ ಅರಿವಿಗೆ ಬಾರದ್ದು. ಇಂಥ ‘ಅದೃಷ್ಟ’ವನ್ನು ‘ದೃಷ್ಟ’ವಾಗಿಸಿಕೊಳ್ಳುವುದು ಸಾಧ್ಯ, ಮತ್ತು ಅದು ನಮ್ಮ ಜವಾಬ್ದಾರಿ. ಹೆಚ್ಚಿನವರು ಅ-ದೃಷ್ಟವನ್ನು ಈ ರೀತಿ ತಮ್ಮ ಹೊಣೆಗಾರಿಕೆಯ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದಿಲ್ಲ. ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ‘ಅದೃಷ್ಟ’ಕ್ಕೆ ಇಲ್ಲದ ಒಂದು ‘ದೈವಿಕ’ ಅರ್ಥವನ್ನು ಕೊಟ್ಟು ಕೆಡುತ್ತಾರೆ. ನಿಜದಿಂದ ಪಲಾಯನ ಮಾಡುತ್ತಾರೆ. ಇಂಥವರ ಸ್ವಭಾವ ಎಷ್ಟರ ಮಟ್ಟಿಗೆ ನಕಾರಾತ್ಮಕವಾಗಿರುತ್ತದೆ ಎನ್ನುವುದಕ್ಕೆ ಮುಂದುವರಿದು ಹೇಳುತ್ತೇನೆ ನೋಡಿ.

ನಾವು ಮೇಲೆ ತಿಳಿದುಕೊಂಡಿರುವಂತೆ ‘ದೃಷ್ಟ’ ಒಂದು ಪಾಸಿಟಿವ್ (ಸಕಾರಾತ್ಮಕ) ಪದ, ಅದಕ್ಕೆ ಅ- ಎಂಬ ಪ್ರತ್ಯಯವನ್ನು ಹಚ್ಚಿದರೆ ಅದು ವಿರುದ್ಧ, ನೆಗೆಟಿವ್ (ನಕಾರಾತ್ಮಕ) ಪದ, ‘ಅ-ದೃಷ್ಟ’ ಅಥವಾ ಅದೃಷ್ಟ ಆಗುತ್ತದೆ. ದೈವಿಕ ನಂಬಿಕೆಯುಳ್ಳವರು ಅದನ್ನೇ ಒಂದು ಪಾಸಿಟಿವಿ (ಸಕಾರಾತ್ಮಕ) ಪದವನ್ನಾಗಿ ಭಾವಿಸುತಾರೆ. ಅದಕ್ಕೆ, ನಮ್ಮ ಅದೃಷ್ಟ ಚೆನ್ನಾಗಿತ್ತು, ಅಥವಾ ನಮ್ಮ ಅದೃಷ್ಟ ಚೆನ್ನಾಗಿಲ್ಲ ಎನ್ನುತ್ತಾರೆ. ಮುಂದುವರಿದು ಅದಕ್ಕೆ ಇನ್ನೊಂದು, ದುರ್- ಎಂಬ ನಕಾರಾತ್ಮಕ ಪ್ರತ್ಯಯವನ್ನು ಹಚ್ಚಿ ‘ದುರದೃಷ್ಟ’ (‘ದುರಾದೃಷ್ಟ’ ಎನ್ನುವುದು ತಪ್ಪು ಪ್ರಯೋಗ) ಎಂಬ ಪದವನ್ನು ಟಂಕಿಸಿಕೊಳ್ಳುತ್ತಾರೆ. ನಿಜದಲ್ಲಿ ದುರದೃಷ್ಟಕ್ಕೆ ಅರ್ಥವೇ ಇಲ್ಲ.

ಇದನ್ನೇ ಮುಂದುವರಿಸಿ ‘ಹಣೆಬರಹ’ ಎಂಬ ಪದವನ್ನೂ ಬಳಸುತ್ತಾರೆ. ವ್ಯಕ್ತಿಯ ಜೀವನದಲ್ಲಿ ಏನನ್ನಾದರೂ ಆದರೆ, ಆಗದಿದ್ದರೆ ಅದಕ್ಕೆಲ್ಲ ನಮ್ಮ ಹಣೆಬರಹವೇ ಕಾರಣ ಎಂದು ಪಲಾಯನ ಮಾಡುತ್ತಾರೆ. ಯಾರದೇ ಹಣೆಯನ್ನು ತೊಳೆದು, ಉಜ್ಜಿ, ಕೆರೆದು ನೋಡಿದರೂ ಅಲ್ಲಿ ಯಾವ ಬರಹವೂ ನಮಗೆ ಕಾಣುವುದಿಲ್ಲ. ಇದರಲ್ಲಿ ಎಲ್ಲ ಧರ್ಮದವರ ಕುರುಡು ನಂಬಿಕೆ ಎಷ್ಟೊಂದು ಎಂದರೆ, ದೇವರು ನಮ್ಮ ಹಣೆಯಲ್ಲಿ ನಮ್ಮ ಭವಿಷ್ಯವನ್ನು ಬರೆದಿರುತ್ತಾನೆ, ಅದರ ಮೇಲೆ ಮತ್ತೆ ವಿಭೂತಿಯನ್ನೋ, ಇನ್ನೇನೋ ಬಳಿದು ಅದನ್ನು ಅಸ್ಪಷ್ಟ ಪಡಿಸುವುದು ತಪ್ಪು ಎನ್ನುವವರೆಗೂ ಭ್ರಮೆಗೆ ಒಳಗಾಗುತ್ತಾರೆ. ನಾವು ಬದುಕುವ ಸರಾಸರಿ 70 ವರ್ಷಗಳ ಕಾಲ ನಡೆಯುವ ಎಲ್ಲವನ್ನೂ ಬರೆಯಬೇಕು ಎಂದರೆ ಹಣೆ ಸಾಕಾಗುವುದಿಲ್ಲ. ಲೇಸರ್ ಬರಹದಲ್ಲಿ ಇಡೀ ದೇಹದ ತುಂಬೆಲ್ಲ ಬರೆದರೂ ಜಾಗ ಸಾಕಾಗುವುದಿಲ್ಲ. ಅಲ್ಲದೇ ಎಲ್ಲವೂ ಈಗಾಗಲೇ ಬರೆದಿದ್ದರೆ ನಮ್ಮ ಪ್ರಯತ್ನಕ್ಕೆ ಬೆಲೆಯೇನು? ತಾಯಿತಂದೆಯರ ಪೋಷಣೆ, ಶಿಕ್ಷಣ, ತರಬೇತಿ, ನೌಕರಿ, ದುಡಿಮೆ, ಕುಟುಂಬ, ದೇಶಕ್ಕಾಗಿ ನಾವು ಮಾಡಬೇಕಾದುದು- ಯಾವುದಕ್ಕಾಗಿಯೂ ನಾವು ಏನನ್ನೂ ಮಾಡಬೇಕಾಗಿಲ್ಲ, ಏಕೆಂದರೆ ಅದು ಈಗಾಗಲೇ ನಮ್ಮ ಹಣೆಯಲ್ಲಿ ಬರೆದಿರುತ್ತದೆ, ನಾವು ಬದಲಾಯಿಸಲು ಸಾಧ್ಯವಿಲ್ಲ. ಈ ತರದ ನಂಬಿಕೆ ನಮಗೆ ನಾವೇ ಮಾಡಿಕೊಳ್ಳುವ ಮೋಸ; ನಮ್ಮ ಈ ಅಜ್ಞಾನದಿಂದ ಲಾಭ ಮಾಡಿಕೊಳ್ಳುವ ಮೋಸಗಾರರ ವ್ಯವಸ್ಥಿತ ಕುತಂತ್ರ; ನಮ್ಮ ಸ್ವಗೌರವ ಮತ್ತು ಸ್ವವಿಶ್ವಾಸವನ್ನು ಹನನ ಮಾಡಿ, ಜಡ ಪರಾವಲಂಬಿಗಳನ್ನಾಗಿ ಮಾಡುವ ಹುನ್ನಾರ.

ನಮ್ಮ ಬದುಕಿನ ಸೋಲು ಗೆಲುವು ಎರಡಕ್ಕೂ ನಾವೇ ಜವಾಬ್ದಾರಿ, ನಾವೇ ಕಾರಣ. ಜೊತೆಗೆ ನಮ್ಮ ಪರಿಸರದಲ್ಲಿರುವ ಇತರ ವ್ಯಕ್ತಿಗಳು, ಸಂಬಂಧಗಳು, ವ್ಯವಸ್ಥೆಗಳು, ಕಾನೂನು, ನೀತಿ ನಿಯಮಗಳು ಇತ್ಯಾದಿ ಭೌತಿಕ ಸಂಗತಿಗಳು ಕಾರಣವಾಗುತ್ತವೆ. ಅದೃಷ್ಟದಲ್ಲಿ, ಹಣೆಬರಹದಲ್ಲಿ ಕುರುಡು ನಂಬಿಕೆಯನ್ನಿಟ್ಟು ಹಾಳಾಗುವುದಕ್ಕಿಂತ ನಮ್ಮ ಮತ್ತು ನಮ್ಮ ಸುತ್ತಮುತ್ತಲಿನ ನಿಜವಾದ ಪ್ರಪಂಚದ ಕುರಿತಾದ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದು ಮತ್ತು ನಮ್ಮ ಬದುಕು, ವೃತ್ತಿಯ ಮಟ್ಟಿಗೆ ಅದನ್ನು ನಿಭಾಯಿಸುವುದನ್ನು ಕಲಿಯುವುದು ಒಳ್ಳೆಯದಲ್ಲವೇ? ಈ ಅರಿವೇ, ಕೌಶಲವೇ ಗೆಲುವಿನ ಸೋಪಾನ!

LEAVE A REPLY

Please enter your comment!
Please enter your name here