– ಅಬೂ ಸಲ್ವಾನ್

ವಿಶ್ವದಲ್ಲಿ ಮಾತೃತ್ವಕ್ಕೆ ಬಹಳ ಮಹತ್ವ ನೀಡ ಲಾಗುತ್ತದೆ. ಎಲ್ಲರೂ ಮಾತೃತ್ವವನ್ನು ಗೌರವಿಸುತ್ತಾರೆ. ಮಾತೃತ್ವವನ್ನು ಗೌರವಿಸದಂತಹ ಒಂದು ಸಮಾಜ ಕಾಣಲು ಸಾಧ್ಯವಿಲ್ಲ. ನಮ್ಮ ಭಾರತದ ಸಮಾಜ ಕೂಡಾ ಮಾತೃತ್ವಕ್ಕೆ ಬಹಳ ಗೌರವಾದರ ನೀಡಿದೆ. ಕುಟುಂಬದ ಸಂಸ್ಥಾಪನೆಯಲ್ಲಿ ಮಾತೆಯ ಪಾತ್ರ ಬಹಳ ಮಹತ್ವದ್ದು. ಕುಟುಂಬದ ಗೌರವ ಕಾಪಾಡಿಕೊಂಡು ಸಮಾಜದಲ್ಲಿ ಕುಟುಂಬ ತಲೆ ಎತ್ತುವಂತೆ ಮಾಡುವುದರಲ್ಲಿಯೂ ಆಕೆಯ ಪಾತ್ರ ಬಹಳಷ್ಟಿದೆ. ಮಾತೆಯನ್ನು ದೇವತೆ ಎಂದು ಪೂಜಿಸುವವರೂ ಈ ದೇಶದಲ್ಲಿದ್ದಾರೆ. ಇಸ್ಲಾಮಿನಲ್ಲಿ ಮಾತೆಗೆ ಬಹಳಷ್ಟು ಗೌರವಾದರವಿದೆ. ಪವಿತ್ರ ಕುರ್ ಆನಿನಲ್ಲಿ ಆಕೆಗೆ ಪ್ರಾರ್ಥಿಸಲು ಕಲಿಸಿಕೊಡಲಾಗಿದೆ. ಮಾತೆಯ ಪಾದದಡಿಯಲ್ಲಿ ಸ್ವರ್ಗವಿದೆಯೆಂಬ ಸಂದೇಶವನ್ನು ಪ್ರವಾದಿ ಮುಹಮ್ಮದ್(ಸ) ಸಾರಿದರು. ಎಲ್ಲಾ ಧರ್ಮಗಳೂ ಮಾತೆಯನ್ನು ಗೌರವಿಸಿದೆ. ಆದರೆ ಪ್ರಸಕ್ತ ಸಂದರ್ಭದಲ್ಲಿ ನಮ್ಮ ಪರಿಸರದಲ್ಲಿ ನಮ್ಮ ದೇಶದಲ್ಲಿ ಮಾತೆಯರನ್ನು ಅಗೌರವದಿಂದ ಕಾಣು ವಂತಹ ವರದಿಗಳು ಧಾರಾಳವಾಗಿ ಕಂಡು ಬರುತ್ತದೆ. ಕುಡಿದು ಬಂದು ತನಗೆ ತಡವಾಗಿ ಊಟ ನೀಡಿದಳು ಎಂಬ ಕಾರಣಕ್ಕಾಗಿ ಹೆತ್ತ ತಾಯಿಯನ್ನೇ ಕತ್ತಿಯಿಂದ ಕಡಿದು ಕೊಂದ ಘಟನೆ ಇತ್ತೀಚೆಗೆ ತಾನೇ ನೆರೆಯ ಕೇರಳದಲ್ಲಿ ನಡೆಯಿತು.

ಸಾಮಾನ್ಯವಾಗಿ ನಮ್ಮ ರಾಜಕೀಯ ಪಕ್ಷಗಳಾಗಲೀ ಧಾರ್ಮಿಕ ಸಭೆ ಸಮಾರಂಭಗಳಲ್ಲಾಗಲೀ ಮಹಿಳೆಯರು ಸೇರಿದ್ದಾರೆಂದಾದರೆ ಮಾತೆಯರೇ ಬಂಧು ಭಗಿನಿಯರೇ ಎಂದು ಅಭಿಸಂಬೋಧಿಸುತ್ತಿರುವುದನ್ನು ನಾವು ಕಾಣಬಹುದು. ಆದರೆ ಅದು ಅವರ ಭಾಷಣಗಳ ವೇದಿಕೆಗೆ ಸೀಮಿತ ವಾಗಿರುತ್ತದೆ. ಮಹಿಳೆಯರ ಬಗ್ಗೆ ನಮ್ಮ ರಾಜ ಕಾರಣಿಗಳು ಅದೆಷ್ಟು ಗೌರವವನ್ನು ಉಳಿಸಿಕೊಂಡಿ ದ್ದಾರೆ ಎಂಬುದನ್ನು ನಮ್ಮ ರಾಜಕಾರಣಿಗಳ ಕೆಲ ಇತಿಹಾಸಗಳು ಸಾರಿ ಸಾರಿ ಹೇಳುತ್ತವೆ. ಲೈಂಗಿಕ ದೌರ್ಜನ್ಯಕ್ಕೆ ನಮ್ಮ ಮಹಿಳೆಯರು ಬಹಳಷ್ಟು ಗುರಿಯಾಗುತ್ತಿದ್ದಾರೆ. ಸ್ವಸ್ಥವಾಗಿ ಮಹಿ ಳೆಗೆ ಎಲ್ಲಿಯೂ ಜೀವಿಸುವಂತಿಲ್ಲ. ಮಹಿಳೆಯರ ಅಭಿವೃದ್ದಿಯ ಬಗ್ಗೆ ರಂಗು ರಂಗಿನ ಮಾತುಗಳ ನ್ನಾಡುತ್ತಾರೆ. ಆದರೆ ಅದು ಕಾರ್ಯ ರೂಪಕ್ಕೆ ಬರುತ್ತಿಲ್ಲ. ಮಹಿಳೆಯೆಂದರೆ ಕೇವಲ ಭೋಗದ ವಸ್ತು ಎಂಬುದು ಇಂದು ಸಮಾಜದಲ್ಲಿ ನಡೆದುಕೊಂಡು ಬರುವ ರೀತಿ. ತನಗಾಗುತ್ತಿರುವ ಅನ್ಯಾಯದ ವಿರುದ್ಧ ಅವಳು ಸೆಟೆದು ನಿಂತರೆ ಅವಳನ್ನೇ ಮಹಾ ಅಪರಾಧಿಯಂತೆ ನಮ್ಮ ಮಾಧ್ಯಮಗಳು ಟೀಕಿಸುತ್ತವೆ. ದೆಹಲಿಯಲ್ಲಿ ಪ್ರತಿಭಟನಾರಂಗದಲ್ಲಿ ಸೆಟೆದು ನಿಂತು ವೀರಾವೇಶ ದಿಂದ ಸರಕಾರದ ದಬ್ಬಾಳಿಕೆಯ ವಿರುದ್ಧ ಹೋರಾಡಿದ ಸಫೂರಾ ಎಂಬ ಗರ್ಭಿಣಿ ಮಹಿಳಾ ಮಣಿಯ ಉದಾಹರಣೆಯನ್ನೇ ತೆಗೆದು ಕೊಳ್ಳಿರಿ. ಸರಕಾರದ ವಿರುದ್ಧ ದನಿಯೆತ್ತಿದ ಆಕೆಯನ್ನು ಸರಳುಗಳ ಮಧ್ಯೆ ಬಂಧಿಸಿಡಲಾಗಿದೆ. ಹೌದು ಅನ್ಯಾಯವಾಗಿ ಯು.ಎ.ಪಿ.ಎ ಕಾನೂನನ್ನು ಹೇರಿ ಜಾಮಿಯಾ ಮಿಲ್ಲಿಯಾದ ವಿದ್ಯಾರ್ಥಿನಿ ಸಫೂರರನ್ನು ಕಳೆದ ಎಪ್ರಿಲ್ 10 ರಂದು ದೆಹಲಿಯ ಪೋಲೀಸರು ಬಂಧಿಸಿದ್ದರು. ಎಪ್ರಿಲ್ ಹದಿಮೂರರಂದು ನ್ಯಾಯಾಲಯ ಜಾಮೀನು ನೀಡಿದರೂ ವಿಶೇಷವಾದ ಹೊಸ ಆರೋಪ ಪಟ್ಟಿ ತಯಾರಿಸಿ ಅದೇ ದಿನ ಸೆರೆಮನೆಗೆ ತಳ್ಳಲಾಯಿತ್ತು. ನ್ಯಾಯ ಎಂಬುದು ಇಲ್ಲಿ ಮರೀಚಿಕೆ ಯಾಗುತ್ತಿದೆ. 21 ವಾರಗಳ ಗರ್ಭವತಿಯಾಗಿರುವ ಅವರು ಬಹಳ ಸಂಕಷ್ಟಮಯ ಪರಿಸ್ಥಿತಿಯಲ್ಲಿ ದ್ದಾರೆಂದು ಅವರ ವಕೀಲರು ನ್ಯಾಯಾಲಯದ ಮುಂದೆ ತಿಳಿಸಿದರೂ ಆ ಮಹಿಳಾ ಮಣಿಗೆ ಜಾಮೀನು ನಿರಾಕರಿಸಲಾದಂತಹ ಕಟು ವಾಸ್ತವವನ್ನು ನಾವು ನೋಡುತ್ತಿದ್ದೇವೆ. ಅಷ್ಟು ಮಾತ್ರವಲ್ಲ ದೆಹಲಿಯ ಮೂರು ಜೈಲುಗಳಲ್ಲಿ ಇರುವ ಖೈದಿಗಳಲ್ಲಿ ಕೆಲವರಿಗೆ ಕೋವಿಡ್- 19 ವೈರಸ್ ದೃಢಪಟ್ಟಿದೆ ಎಂಬ ವಾರ್ತೆಗಳನ್ನೂ ನಾವು ಆಲಿಸುತ್ತಿದ್ದೇವೆ.
ಅವರಿಗೆ ನೀಡಿದ ಜಾಮೀನನ್ನು ರದ್ದುಪಡಿಸಿದ ದೆಹಲಿಯ ನ್ಯಾಯಾಲಯ ಈ ರೀತಿ ತನ್ನ ತೀರ್ಪನ್ನು ಪ್ರಕಟಿಸಿತು. “ನೀವು ಬೆಂಕಿಯಲ್ಲಿ ಆಟವಾಡಲು ನಿರ್ಧರಿಸುವಾಗ ಬೆಂಕಿಯುಂಡೆಗಳು ಇನ್ನೂ ಮುಂದಕ್ಕೆ ಹೋಗಿ ಹರಡಿದಾಗ ಗಾಳಿ ಯನ್ನು ದೂರಲಾಗುತ್ತದೆಯೇ? ನ್ಯಾಯಾಲಯದ ಈ ಹೇಳಿಕೆಯನ್ನು ಖಂಡಿಸಿ ಕಾನೂನು ತಜ್ಞರಾದ ಗೌತಮ್ ಭಾಟಿಯಾ ಈ ರೀತಿ ಅಭಿಪ್ರಾಯ ಪಡುತ್ತಾರೆ.” ಓರ್ವ ವ್ಯಕ್ತಿಯನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡುವುದನ್ನು ಸಮರ್ಥಿಸುವುದಕ್ಕಾಗಿ ನ್ಯಾಯಾಲಯ ಕಾನೂನಿನುಸಾರ ವಿವಿಧ ಭಾವಾರ್ಥಗಳನ್ನು ಆಶ್ರಯಿಸಬೇಕಾಗಿ ಬಂದಿರುವುದು ದುರದೃಷ್ಟಕರ.

ಈ ಭಾರತದ ಮಣ್ಣಿನಲ್ಲಿ ಹುಟ್ಟಿದ ಸಫೂರಾ ಎಂಬ ಮಣ್ಣಿನ ಮಗಳ ಮೇಲೆ ತೋರಿಸುತ್ತಿರುವ ಅನ್ಯಾಯವು ಇಲ್ಲಿನ ಧರ್ಮ ಬೆರೆತ ರಾಜಕೀಯ ದಿಂದ ಕೂಡಿದ ಷಡ್ಯಂತ್ರವಾಗಿದೆ. ಸಫೂರಳ ಸದ್ದು ಅಣಗಿಸಲು ಸರಕಾರ ಪ್ರಯತ್ನಿಸಿದಷ್ಟೂ ಸಫೂರ ಮನೆ ಮಾತಾಗುತ್ತಿದ್ದಾಳೆ. ಹೋರಾಟದ ಸ್ಫೂರ್ತಿಯ ಚಿಲುಮೆಯಾಗಿ ಮಾರ್ಪಟ್ಟಿದ್ದಾಳೆ. ಸಫೂರಳನ್ನು ನ್ಯಾಯದ ಮೂಲಕ ಎದುರಿಸಲು ಹರಸಾಹಸ ಪಟ್ಟ ನಮ್ಮ ಆಡಳಿತವು ಆಕೆಯ ಮೇಲೆ ಸುಳ್ಳು ಕಪೋಲ ಕಲ್ಪಿತ ಲೈಂಗಿಕ ಆರೋಪ ಹೊರಿಸುವ ಮೂಲಕ ಅವರ ಸದ್ದನ್ನು ಇಲ್ಲದಂತೆ ಮಾಡಲು ಪ್ರಯತ್ನಿಸಿದರು. ಕೆಲವರು ಅವಿವಾಹಿತೆಯಾದ ಗರ್ಭಿಣಿ ಎಂದು ಹೇಳುವ ಮೂಲಕ ತಮ್ಮ ತೆವಲು ತೀರಿಸಿ ಕೊಂಡರು. ಇಂತಹ ಸುಳ್ಳು ಹೇಳಿಕೆಗಳ ಸರಮಾಲೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಕೊನೆಗೆ ಅವರ ಪತಿಯೇ ಮಾಧ್ಯಮದ ಮುಂದೆ ಬಂದು ನಾವು 2018 ರಲ್ಲಿಯೇ ವಿವಾಹಿತರಾಗಿದ್ದೇವೆಂದು ಬಹಿರಂಗವಾಗಿ ಹೇಳಬೇಕಾಯಿತು.

ರಾಜಕೀಯ ಷಡ್ಯಂತ್ರದ ಮೂಲಕ ಸಫೂರಳ ವಿರುದ್ಧ ಸಮಾಜದಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಲು ಶ್ರಮಿಸಲಾಯಿತು. ಕೆಲ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲ ತಾಣಗಳು ವ್ಯರ್ಥ ಕಸರತ್ತುಗಳಲ್ಲಿ ತೊಡಗಿಕೊಂಡವು. ಆದರೆ ಆಕೆಯ ಹೋರಾಟದ ಮತ್ತು ಆಡಳಿತದ ದಬ್ಬಾಳಿಕೆಯ ದೌರ್ಜನ್ಯದ ವಾಸ್ತವವನ್ನು ಜನರ ಮುಂದಿಡಲು ಇಲ್ಲಿನ ಕೆಲ ಮಾಧ್ಯಮಗಳು ಮಾತ್ರ ಮುಂದಾಗಲಿಲ್ಲ. ಆಕೆಯ ಬಗ್ಗೆ ಒಂದು ಕನಿಕರದ ಸಾಂತ್ವನದ ನೋಟ ಕೂಡಾ ಬೀರಿಲ್ಲ ಎಂಬುದು ವಾಸ್ತವ ಸತ್ಯವಾಗಿದೆ. ಗರ್ಭೀಣಿಯಾದ ಒಂದು ಆನೆಯು ಪಟಾಕಿ ತುಂಬಿಸಿದ ಅನಾನಸು ತಿಂದು ಪ್ರಾಣ ಕಳೆದು ಕೊಂಡ ದುರಂತ ಸನ್ನಿವೇಶ ಬಗ್ಗೆ ಹಲವಾರು ಜನರು ಕನಿಕರ ಖೇದ ವ್ಯಕ್ತ ಪಡಿಸಿದರು. ರಾಜಕಾರಣಿಗಳು ಕ್ರೀಡಾಪಟುಗಳು, ಚಿತ್ರ ನಟರು ತಮ್ಮ ಖೇದವನ್ನು ಪ್ರಕಟಿಸಿದರು. ಸುಮಾರು ಒಂದು ವಾರಗಳ ವರೆಗೆ ಮಾಧ್ಯಮಗಳಲ್ಲಿ ಈ ಮೂಕ ಪ್ರಾಣಿಯ ಕುರಿತು ಚರ್ಚಿಸಲಾಯಿತು. ಆದರೆ ಅದರ ಒಂದರ್ಧದಷ್ಟಾದರೂ ವೇಳೆಯನ್ನು ನಮ್ಮ ಸಫೂರಾ ಎಂಬ ತುಂಬು ಗರ್ಭಿಣಿಯ ಬಗ್ಗೆ ಕಣ್ಣೀರು ಸುರಿಸಲಾಗಲಿಲ್ಲ ಎಂಬುದು ದುರಂತ. ಯಾಕೆಂದರೆ ಇಲ್ಲಿ ಹಗೆ ಧಗೆಯ ಪಕ್ಷಪಾತದ ಪ್ರತೀಕಾರದ ರಾಜಕೀಯ ಮತಾಂಧತೆ ಎಲ್ಲವೂ ತಲೆಯನ್ನು ಆವರಿಸಿರುವಾಗ ಈ ನೋವು ಅವರಿಗೆ ಅರ್ಥವಾಗುವುದಾದರೂ ಹೇಗೆ?

ಕೃಪೆ : ಸನ್ಮಾರ್ಗ ವಾರ ಪತ್ರಿಕೆ

LEAVE A REPLY

Please enter your comment!
Please enter your name here