ಚರಣ್ ಐವರ್ನಾಡು

ಸಂಸ್ಕøತಿಯೊಂದು ತಾನು ಹುಟ್ಟಿದ ಸಮುದಾಯ ಮತ್ತು ನೆಲೆಯನ್ನು ಮೀರಿ ಬೆಳೆಯುವುದು ಒಳ್ಳೆಯ ಲಕ್ಷಣ. ಇದು ಭಾಷೆಗೂ ಅನ್ವಯಿಸುತ್ತದೆ. ಕೊಡುಕೊಳ್ಳುವಿಕೆ ನಡೆಯದ ಹೊರತು ಭಾಷೆ ಮತ್ತು ಸಂಸ್ಕøತಿ ಬೆಳೆಯಲು ಸಾಧ್ಯವಿಲ್ಲ. ಭಾರತ ಸೇರಿದಂತೆ ವಿಶ್ವ ಜನಪದಗಳಲ್ಲಿ ಕಾಣುವ ಈ ಲಕ್ಷಣ ಆ ಸಂಸ್ಕøತಿಯ ಅಮೂಲಾಗ್ರ ಸ್ಥಿತ್ಯಂತರ ಮಾಡದೆ ಬೆಳೆಸಿದೆ. ಒಂದು ಸಮುದಾಯ ಬೆಳೆಸಿಕೊಂಡು ಬಂದ ಆಚರಣೆಗಳನ್ನು ಇತರ ಸಮುದಾಯಗಳು ಸ್ವೀಕರಿಸುವುದನ್ನು ಕೇರಳದ ತೆಯ್ಯಂನ ಒತ್ತೆಕೋಲವನ್ನು ತುಳುನಾಡಿನ ಸಮುದಾಯಗಳು ಸ್ವೀಕರಿಸಿದ ಬಗೆಯನ್ನು ಇಲ್ಲಿ ಉದಾಹರಿಸುತ್ತೇನೆ.

ನಿಗಿ ನಿಗಿ ಕೆಂಡದ ರಾಶಿಯ ಮೇಲೆ ಸರ್ವಾಲಂಕಾರ ಭೂಷಿತವಾದ ದೈವವೊಂದರ ಕಾರ್ಣಿಕವನ್ನು ನೋಡಲು ದಕ್ಷಿಣಕನ್ನಡ ಮತ್ತು ಕೇರಳದ ಗಡಿ ಪ್ರದೇಶಗಳಿಗೆ ಬರಬೇಕು. ಇಲ್ಲಿ ತಾವು ನಂಬಿದ ದೈವ ಮೈದಳೆದು ತಮ್ಮ ಎದುರು ನಿಂತಾಗ ಭಕ್ತರು ಭಾವುಕರಾಗಿ ಮೈಮರೆಯುತ್ತಾರೆ! ಸ್ವತಃ ಮಹಾವಿಷ್ಣು ಧರೆಗೆ ಇಳಿದು ಬರುವ ವಿಶಿಷ್ಟ ಜಾನಪದ ಆಚರಣೆ ಒತ್ತೆಕೋಲ!

ರಥದೋಪಾದಿಯಲ್ಲಿ ನಿರ್ಮಿಸಿದ ಕಟ್ಟಿಗೆಯ ರಾಶಿ ರಾತ್ರಿಯಿಡೀ ಉರಿದ ಕೆಂಡದ ಮೇಲೆ ಮುಂಜಾನೆ ತೆಂಗಿನ ಗರಿಗಳಿಂದ ಹಾಗೂ ಮುಖ ವರ್ಣಿಕೆಯಿಂದ ಸಿಂಗಾರಗೊಂಡ ವಿಷ್ಣುಮೂರ್ತಿ ದೈವ ತನ್ನ ಪ್ರತಾಪವನ್ನು ತೋರಿಸುವ ವಿಶಿಷ್ಟ ಆಚರಣೆ ಒತ್ತೆಕೋಲ. ತುಳುನಾಡಿನ ದೈವಾರಾಧನೆಗೆ ಸಂವಾದಿಯಾದ ಕೇರಳದ ತೆಯ್ಯಂನ ಈ ಆಚರಣೆಯನ್ನು ಮೇ-ಎಪ್ರಿಲ್ ತಿಂಗಳಲ್ಲಿ ದಕ್ಷಿಣಕನ್ನಡ, ಕೇರಳ ಹಾಗೂ ಕೊಡಗಿನ ಅನೇಕಭಾಗಗಳಲ್ಲಿ ನೋಡಬಹುದು. ಕೇರಳ ಮೂಲದ ಒತ್ತೆಕೋಲದಲ್ಲಿ ಕೇರಳದ ಮಲಯ ಸಮುದಾಯದ ದೈವ ಪಾತ್ರಿ ಉರಿಯುವ ಕೆಂಡದ ರಾಶಿಯ ಮೇಲೆ ಬಿದ್ದೇಳುತ್ತಾನೆ. ದೈವದ ಜೊತೆಗೆ ಹತ್ತಾರು ಬೆಳ್ಚಪ್ಪಾಡ ಸಮುದಾಯದವರು ಕೆಂಡದ ಮೇಲೇರಿ ಹೋಗುತ್ತಾರೆ. ಒತ್ತೆಕೋಲವೆಂದರೆ ಒಂದೇ ದೈವದ ಕೋಲ.

ಇಲ್ಲಿ ವಿಷ್ಣುಮೂರ್ತಿಯ ಆರಾಧನೆ ನಡೆಯುತ್ತದೆ. ವಿಷ್ಣುವಿನ ನರಸಿಂಹಾವತಾರವನ್ನು ಪ್ರತಿಬಿಂಬಿಸುವ ಈ ಆಚರಣೆ ಅವತಾರದ ಭಿನ್ನ ನೆಲೆಗಳನ್ನು ತೋರಿಸುತ್ತದೆ. ಆರಾಧನೆಯ ಪ್ರತೀ ಪ್ರಕ್ರಿಯೆಯಲ್ಲಿ ನರಸಿಂಹಾವತಾರ ಅಭಿವ್ಯಕ್ತಗೊಳ್ಳುತ್ತದೆ. ಸಾತ್ವಿಕ ಹಾಗೂ ತಾಮಸಿಕ ಕ್ರಿಯೆಗಳೆರಡರಲ್ಲೂ ಆರಾಧನೆಗೊಳಪಡುವ ವಿಷ್ಣುಮೂರ್ತಿ ದೈವ ಕುಳಿಚ್ಚಾಟ್ನಲ್ಲಿ ಹಿರಣ್ಯಕಶಿಪುವಿನ ಸಂಹಾರದ ಅಭಿನಯವನ್ನು ಮಾಡುತ್ತದೆ.
ಒತ್ತೆಕೋಲಕ್ಕೆ ದಿನ ನಿಗದಿಪಡಿಸಿದ ನಂತರ ಕೊಳ್ಳಿ ಕಡಿಯುವ ಮುಹೂರ್ತ ಏರ್ಪಡಿಸುತ್ತಾರೆ. ಊರವರ ಸಮಕ್ಷಮದಲ್ಲಿ ದೈವದ ಪೂಜಾರಿಗಳಾದ ಬೆಳ್ಚಪ್ಪಾಡರು (ತೀಯ ಸಮುದಾಯದವರು) ಹಾಲು ಒಸರುವ ಹಲಸಿನ ಇಲ್ಲವೇ ಹಾಲೆ ಮರದ ಕೊಳ್ಳಿಗಳನ್ನು ಕಡಿಯುವುದರ ಮೂಲಕ ಮುಹೂರ್ತವನ್ನಿಡುತ್ತಾರೆ. ಊರಿನವರೆಲ್ಲರೂ ತಮ್ಮ ತಮ್ಮ ಮನೆಗಳಿಂದ ಕಟ್ಟಿಗೆಗಳನ್ನು ಒಯ್ದು ರಾಶಿಹಾಕುತ್ತಾರೆ. ಇಲ್ಲಿ ಕಾಸರಕ, ಮಾವು ಮೊದಲಾದಮರಗಳ ಕಟ್ಟಿಗೆಗಳು ನಿಷಿದ್ದ. ಒತ್ತೆಕೋಲದ ದಿನ ಪೂರ್ವಾಹ್ನ ಈ ಕಟ್ಟಿಗೆಗಳನ್ನು ಓರಣವಾಗಿ ಜೋಡಿಸಿ ತೆಂಗಿನ ಮಡಲುಗಳನ್ನು ಪೇರಿಸಿಡುತ್ತಾರೆ. ವ್ಯವಸ್ಥಿತವಾಗಿ ಜೋಡಿಸಲಾದ ಈ ಕಟ್ಟಿಗೆಯ ರಾಶಿ ರಥವನ್ನು ಹೋಲುತ್ತದೆ. ದೈವಸ್ಥಾನದಿಂದ ದೈವದ ಭಂಡಾರವನ್ನು ಕೊಡಿಯಡಿಗೆ ಬಂದಂತೆ ಈಮೇಲೇರಿಗೆ ಅಗ್ನಿಸ್ಪರ್ಷ ನೀಡಲಾಗುತ್ತದೆ.

ಕುಳಿಚ್ಚಾಟ್ ಎಂಬುದು ಒಂದು ವಿಶಿಷ್ಟ ಆಚರಣೆ. ಇಲ್ಲಿದೈವದ ನರ್ತನ ಹಿರಣ್ಯಕಶಿಪುವಿನ ಸಂಹಾರವನ್ನು ಬಿಂಬಿಸುವ ಕಥಕ್ಕಳಿ ಯನ್ನು ಹೋಲುತ್ತದೆ. ದೈವನರ್ತಕ ಹಿರಣ್ಯಕಶಿಪುವಿನ ಕರುಳನ್ನು ಬಗೆದು ರಕ್ತ ಹೀರುವ ಅಭಿನಯವನ್ನು ಮಾಡುತ್ತಾನೆ. ಕುಳಿಚ್ಚಾಟ್ ದೈವ ಉರಿಯುವ ಬೆಂಕಿರಾಶಿಯ ಸುತ್ತ ಓಡುತ್ತಾ ಅದರ ಮೇಲೆ ಏರಿ ಹೋಗಲು ಯತ್ನಿಸುತ್ತದೆ. ತೀಯರು ಕೋಟೆ ಕಟ್ಟಿ ದೈವವನ್ನು ತಡೆಯುತ್ತಾರೆ. ಇಲ್ಲಿ ಪಾತ್ರಿ ಹಾಡುವ ಸಂಸ್ಕøತ ಮಿಶ್ರಿತ ಮಲಯಾಳದ ವಿಷ್ಣು ಸ್ತುತಿಯಲ್ಲಿ ವೈಷ್ಣವ ಪ್ರಭಾವವನ್ನು ಕಾಣಬಹುದು. ಇಲ್ಲಿ ಆರಾಧನೆಯ ಜಾನಪದ ಮೂಲದ ಸಂಕಥನವನ್ನು ನೋಡಲು ಸಾಧ್ಯವಿಲ್ಲ. ಇದು ಸರಿಸುಮಾರು ಮಧ್ಯರಾತ್ರಿ ನಡೆಯುವ ಆಚರಣೆ.

ಮುಂಜಾನೆಯಾಗುತ್ತಿದ್ದಂತೆ ವಿಷ್ಣುಮೂರ್ತಿದೈವ ಸಿರಿಸಿಂಗಾರಗೊಂಡು ಗಾಂಭಿರ್ಯದಿಂದ ಎದ್ದು ನಿಲ್ಲುತ್ತದೆ. ದೈವ ನರ್ತನವನ್ನು ಆರಂಭಿಸುತ್ತಿದ್ದಂತೆ ತೀಯ ಪೂಜಾರಿಗಳಿಗೆ ಆವೇಶವಾಗಿ ಕೆಂಡದ ರಾಶಿಯ ಮೇಲೆ ಏರಿ ಹೋಗುತ್ತಾರೆ. ಅವರೊಂದಿಗೆ ವಿಷ್ಣುಮೂರ್ತಿಯೂ ಅಂಗಾತವಾಗಿ ಮತ್ತು ಮೇಲ್ಮುಖವಾಗಿ ಬೀಳುತ್ತದೆ. ದೈವ ಬೀಳುತ್ತಿದ್ದಂತೆ ಮಲಯರು ದರದರನೆ ಹೊರಗೆಳೆಯುತ್ತಾರೆ. ರೋಮಾಂಚನಕಾರಿಯಾದ ಈ ಸನ್ನಿವೇಶವನ್ನು ಭಕ್ತರು ಭಾವುಕರಾಗಿ ಅನುಭವಿಸುತ್ತಾರೆ. ದೈವವು ನೆರೆದ ಭಕ್ತರನ್ನು ಮಾತನಾಡಿಸಿ ಅಭಯ ನೀಡುತ್ತದೆ. ಭಾರಣೆ, ಮಾರಿಕಳ (ಕೋಳಿ ಬಲಿ) ಹಾಗೂ ಪ್ರಸಾದ ವಿತರಣೆ ಮುಂತಾದ ವಿಧಿ ವಿಧಾನಗಳು ಮುಗಿದು ದೈವದ ಭಂಡಾರ ಯಥಾ ಸ್ಥಾನವನ್ನು ಸೇರುವ ಮೂಲಕ ಒತ್ತೆಕೋಲ ಸಮಾಪನಗೊಳ್ಳುತ್ತದೆ.

ವಿಷ್ಣುಮೂರ್ತಿದೈವದ ಬಗ್ಗೆ ಮೌಖಿಕ ಕಥನವೊಂದಿದೆ. ಇದು ದೈವ ತುಳುನಾಡಿಗೆ ಪ್ರಸರಣ ಹೊಂದಿದ ಹಿನ್ನಲೆಯನ್ನು ತಿಳಿಸುತ್ತದೆ. ತೀಯ ಸಮುದಾಯದ ಪಾಲತಾಯಿ ಕಣ್ಣನ್ ಎಂಬ ನೀಲೇಶ್ವರ ಮೂಲದ ತೀಯ ಯುವಕ “ಕುರುವತ್ ಕುರುಪ್” ಎಂಬಾತನಿಗೆ ಸೇರಿದ ಮಾವಿನ ಮರದಿಂದ ಹಣ್ಣನ್ನು ಕೀಳುತ್ತಾನೆ. ಇದರಿಂದ ಕೋಪೋದ್ರಿಕ್ತನಾದ ಕುರುಪ್ ತನ್ನ ಸಂಗಡಿಗರೊಂದಿಗೆ ಸೇರಿ ಕಣ್ಣನ್ ಅನ್ನು ಹೊಡೆದು ನೀಲೇಶ್ವರದಿಂದ ಹೊರಹಾಕುತ್ತಾನೆ.

ಇಲ್ಲಿಂದ ಮಂಗಳೂರಿನ ಜೆಪ್ಪಿಗೆ ಬಂದ ಈತನಿಗೆ ಬ್ರಾಹ್ಮಣ ಸ್ತ್ರೀಯೋರ್ವಳು ಆಶ್ರಯ ನೀಡುತ್ತಾಳೆ. ಕೆಲ ದಿನಗಳ ನಂತರ ತನ್ನ ಊರಿಗೆ ಹೊರಡಿ ನಿಂತ ಕಣ್ಣನ್ಗೆ ಆ ಹೆಂಗಸು ತಾನು ನಂಬಿದ ವಿಷ್ಣುವಿನ ಕತ್ತಿ ಹಾಗೂ ತತ್ರವನ್ನು (ಒಲಿಯ ಕೊಡೆ) ಕೊಡುತ್ತಾಳೆ. ಆಗ ಅವನಶರೀರಕ್ಕೆ ದೈವದ ಆವೇಶವಾಗುತ್ತದೆ. ಕಣ್ಣನ್ ನೀಲೇಶ್ವರಕ್ಕೆ ಬರುತ್ತಿದ್ದಂತೆ ಆತನನ್ನು ಕುರುಪ್ ಕೊಲ್ಲುತ್ತಾನೆ. ಇದರಿಂದ ಕುರುಪನ ಕುಟುಂಬ ವಿಷ್ಣುಮೂರ್ತಿಯ ಕೋಪಕ್ಕೆ ತುತ್ತಾಗಿ ಸಿಡುಬು ಬಾಧಿಸುತ್ತದೆ. ಮುಂದೆ ಕುರುಪ್ ದೈವವನ್ನು ಆರಾಧಿಸಲು ತೊಡಗುತ್ತಾನೆ. ಮುಂದೆ ಒತ್ತೆಕೋಲ ಕೇರಳ, ತುಳುನಾಡು ಹಾಗೂ ಕೊಡಗಿನೆಲ್ಲೆಡೆ ಪ್ರಸರಣ ಹೊಂದುತ್ತದೆ. ಸುಳ್ಯ ಹಾಗೂ ಕೊಡಗಿನಲ್ಲಿ ಅರೆಭಾಷಿಕ ಗೌಡರು ತಮ್ಮ ಕುಟುಂಬದ ದೈವವಾಗಿ ಆರಾಧಿಸುತ್ತಾರೆ.

ಒತ್ತೆಕೋಲದಲ್ಲಿ ವೈಷ್ಣವತೆಯ ಗಾಢ ಪ್ರಭಾವ ಕಂಡು ಬಂದರೂ ಜಾನಪದ ಮೂಲದ ತಾಂತ್ರಿಕ ಆಚರಣೆಗಳು ಕಂಡು ಬರುತ್ತದೆ. ಇಲ್ಲಿ ಸಾಂಸ್ಕøತಿಕ ಹಾಗೂ ಆರಾಧನಾ ಪರಿಧಿಯ ಒಳಗೆ ಮಲವ, ಮಡಿವಾಳ ಮತ್ತು ತೀಯರನ್ನು ಹೊರತು ಇತರ ಜನಾಂಗದವರಿಗೆ ಪ್ರವೇಶವಿಲ್ಲ, ಅವರು ಕೇವಲ ಭಕ್ತರಷ್ಟೇ! ಇದು ಒತ್ತೆಕೋಲದ ಒಳಗೆ ವೈದಿಕ ಆಚರಣೆಗಳ ಪ್ರವೇಶವನ್ನು ತಡೆದಿದೆ. ಆಡಂಬರದ ವೈಭವೀಕೃತ ಆಚರಣೆಗಳಿಂದ ಘಟಿಸುವ ಸಾಂಸ್ಕøತಿಕ ಸ್ಥಿತ್ಯಂತರದ ಸಂದರ್ಭದಲ್ಲಿ ಒತ್ತೆಕೋಲದಂತಹ ಆರಾಧನಾ ಪರಂಪರೆ ತನ್ನತನವನ್ನುಉಳಿಸಿಕೊಳ್ಳುವುದು ಸವಾಲಾಗಿದೆ.

ಚರಣ್ ಐವರ್ನಾಡು
ಪಾಲೆಪ್ಪಾಡಿ
ಸುಳ್ಯ

LEAVE A REPLY

Please enter your comment!
Please enter your name here