• ಸಿಹಾನ ಬಿ.ಎಂ.

ಈ ಆರು ವರುಷಗಳಲ್ಲಿ ಕೇವಲ ನೋವಿನ , ಇರಿಯುವ ಘಟನೆಗಳೇ ನಡೆಯುತ್ತಿದೆ. ಪರಸ್ಪರ ಬಡಿದಾಟ , ಹೊಡೆದಾಟ , ದ್ವೇಷ , ಅಕ್ರಮ , ಅನೀತಿಯ ಮುಖಗಳು ಅಲ್ಲೊಂದು ಇಲ್ಲೊಂದು ಎಂಬಂತೆ ಮರೆಯಲ್ಲಿದ್ದರೂ ಇಂದು ಅದೇನೋ ವಿಜೃಂಭಣೆಯ ದೃಶ್ಯವಾಗಿ ಹೊರ ಚೆಲ್ಲುತ್ತಿದೆ‌. ತಪ್ಪುಗಳು ಸಂಭವಿಸುತ್ತಿದ್ದರೂ ತಪ್ಪೇ ನಡೆದಿಲ್ಲ ಎಂಬಂತಹ ವರ್ತನೆಗಳು…. ! ಮನುಷ್ಯತ್ವದ ಸಣ್ಣ ಪುಟ್ಟ ಕೃತ್ಯಗಳು ಮಹಾ ಸಾಧನೆಯ ಮಜಲುಗಳಾಗಿ ಗುರುತಿಸಲ್ಪಡುವುದು… ನ್ಯಾಯಕ್ಕಾಗಿ , ಉಳಿವಿಗಾಗಿ ತನ್ನವರ ಮುಂದೆ ಭಿಕ್ಷುಕರ ಹಾಗೆ ಅಂಗಲಾಚುವ ಕೆಟ್ಟ ಪರಿಸ್ಥಿತಿಗಳು…ಆಳುವವನೊಂದಿಗೆ ತಣ್ನೆಳಲ ಸೂರಿಗಾಗಿ , ಇರುವಿಗಾಗಿ ಕತ್ತೆತ್ತಿ ನೋಡುವ ಕೊನೆಯ ವಾಕ್ಕಿಗಾಗಿ ಚಡಪಡುವಿಕೆಯ ಕಾತರವಿಕೆ… ಮೈವೆತ್ತ ಹೃದಯದೊಳಗಿನ ಹಳೆಯ ರೋಗ ಮತ್ತಷ್ಟು ಉಲ್ಬಣಿಸಿತೇ ಹೊರತು ಅದಕ್ಕೊಂದು ಕೊನೆ ಹಾಡಲು ಇನ್ನೂ ತೊಡಗದಿರುವುದು ವಿಪರ್ಯಾಸವಲ್ಲದೆ ಮತ್ತೇನು..?

ಪರತಂತ್ರದ ತೊಳಲಾಟದ ನರಳಾಡುವಿಕೆಯ ನಡುವೆ ಎಲ್ಲಿಂದಲೂ ವಕ್ಕರಿಸಿದ ಮಹಾಮಾರಿ ರೋಗ ಇದೀಗ ತನ್ನ ನೃತ್ಯದಾಟದ ವೇಗ ಹೆಚ್ಚಿಸಿರುವುದು ದಿಗಿಲು ಹುಟ್ಟಿಸಿದೆ. ಎಷ್ಟೇ ಅತ್ಮವಿಶ್ವಾಸ ಬೆಳೆಸಬೇಕೆನಿಸಿದರೂ ಮನದ ಮೂಲೆಯಲ್ಲೊಂದು ಭಯದ ವಾತಾವರಣ. ಈ ಸಮಯದಲ್ಲಿ ಆತ್ಮವಿಶ್ವಾಸ ಬೆಳೆಸುತ್ತಾ ಪರರಿಗೂ ಆತ್ಮಧೈರ್ಯವನ್ನು ತುಂಬಿಸುವುದೇ ನಮ್ಮ ತಾಕತ್ತು. ಚಪ್ಪಾಳೆ , ಜಾಗಟೆ ತಟ್ಟಿ ಗೋ , ಅಹಹ ಎಂದರಚಿದರೂ ಪರಿಹಾರ ಸಿಗಲಾರದೆಂದು ಗೊತ್ತಿದ್ದರೂ ತಟ್ಟಿದವರನ್ನು ನೆನೆದು ಅಯ್ಯೋ ಎನಿಸಿದರೂ ಇಂತಹ ಪರಿಸ್ಥಿತಿಯಲ್ಲೂ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ. ರೋಗದಿಂದ ಪಾರುಗೊಳಿಸುವ ಪ್ರಯತ್ನ ನಡೆಯದಿದ್ದರೂ ತನ್ನ ಪುಕ್ಕಟೆ ಸಲಹೆಗೆ ತಲೆದೂಗಿದ ಅನುಯಾಯಿಗಳ ಅನುಸರಣೆಗೆ ಆಜ್ಞೆ ಹೊರಡಿಸಿದಾತ ತೃಪ್ತನಾಗಿರುವುದಂತು ಗ್ಯಾರಂಟಿ. ಅದಕ್ಕೆ ತಾನೇ ಇನ್ನಷ್ಟು ಅರ್ಥವಿಲ್ಲದ ಫಲಕಾರಿಯಾಗದ ಸಲಹೆ ನೀಡುತ್ತಲೇ ಬರುತ್ತಿರುವುದು !

ಕ್ಷಣ ಕ್ಷಣಕ್ಕೂ ಸಾವಿನ ಸುದ್ಧಿ ಎದೆ ನಡುಗಿಸುತ್ತಿದೆ. ವಿದ್ಯುತ್ ದೀಪದ ಕಂಬಗಳಂತೆ ಪಟಾಕಿ ಸಿಡಿಸುವ ದೃಶ್ಯಗಳಂತೆ ಮಾನವ ದೇಹವನ್ನು ಸುಡುತ್ತಿರುವುದು , ಹೆಣ ಕಟ್ಟಲು ಚಟ್ಟ ತಯಾರಿಕೆಯ ಅಬ್ಬರದ ಸಿದ್ದತೆ , ಪ್ರೀತಿಸುವ ಜೀವಗಳನ್ನು ಸ್ಪರ್ಶಿಸಲೂ ಸಾಧ್ಯವಾಗದೆ ಬಿಟ್ಟಗಲುವಾಗ ನೋವಿನಿಂದ ಭಾರವಾಗುವ ಮನಸ್ಸುಗಳು , ಕನಸುಗಳನ್ನು ಕಟ್ಟಿ ಬೆಳೆಸುವ ಸಮಯದಲ್ಲೇ ದುರಂತ ಕಾಣುವ ಅಂತ್ಯ , ಅದೆಷ್ಟೇ ಗೋಗೆರೆದರೂ ಕಿರುಚಾಡಿದರೂ ಅಳಲು ಕೇಳಲು ತಯಾರಾಗದ ಪಿತ್ತಾಳೆ ಶ್ರವಣಗಳು , ಮಬ್ಬು ಮಿಗವನ್ನಿಷ್ಟೂ ಬಿಡದೆ ಕೊಚ್ಚಿ ಹೋಗುತ್ತಿರುವ ಸಾವಿನ ದೃಶ್ಯ ನಿಜಕ್ಕೂ ಎಲ್ಲರ ಮನವನ್ನು ತಲ್ಲಣಗೊಳಿಸಿದೆ. ಕೊರೋನ ವಾರಿಯರ್ಸ್ ಗಳ ದುಃಖ ಭರಿತ ಕಣ್ಣುಗಳು , ರಕ್ಷಿಸಲು ಸಾಧ್ಯವಾಗದೆ ಸೋತ ಕರಗಳು , ಕ್ಷಣ ಕ್ಷಣಕ್ಕೂ ನಡುಕ ಹುಟ್ಟಿಸುವ ಕಾಲುಗಳು ಹದಮೀರಿದ ಪರಿಸ್ಥಿತಿಯ ತೀವ್ರತೆಯನ್ನು ದಿನಕ್ಕಳೆದಂತೆ ಪ್ರದರ್ಶಿಸುತ್ತಿದೆ.

ಆದರೂ ಇಲ್ಲಿ ಗುರುತಿಸಲ್ಪಡಬೇಕಾದ ಮಾನವತೆಯ ಮುಖಗಳು ಹಗಲೂ ರಾತ್ರಿಯೆನ್ನದೆ ಜನಸೇವೆಗೆ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಸರಕಾರದತ್ತ ಹೊರಳಿದ ನಿರೀಕ್ಷೆಯ ಕಣ್ಣುಗಳು ಇಂದು ಇಂತಹ ಆಶ್ರಯದಾತರನ್ನು ಹುಡುಕುತ್ತಿರುವುದು , ಯಾರನ್ನು ಕೋಮುವಾದಿಗಳೆಂದು ಬಿಂಬಿಸ ಹೊರಟಿರುವಿರೋ ಅವರೇ ಇಂದು ಸಹಾಯ ಹಸ್ತ ಚಾಚಲು ಮುಂದಾಗಿರುವುದು, ಇದುವರೆಗೂ ತಾವು ಮಾಡದ ಅನ್ಯ ಧರ್ಮದ ಅಂತ್ಯ ಸಂಸ್ಕಾರವನ್ನು ತಾತ್ಸಾರದಿಂದ ನೋಡದೆ ತಾವಾಗಿಯೇ ನಿರ್ವಹಿಸಲು ತೊಡಗಿರುವುದು , ರಮಝಾನಿನ ಉಪವಾಸದ ಸಮಯದಲ್ಲಿ ಉಪವಾಸಿಗರಿಂದ ತುಂಬಿ ತುಳುಕಬೇಕಾದ ಮಸೀದಿಗಳು ಚಿಕಿತ್ಸಾ ಕೇಂದ್ರವಾಗಿ ಮಾರ್ಪಾಡಾಗಿರುವುದು ಇದೆಲ್ಲವು ಭಾತೃತ್ವದ ಸಂದೇಶವಲ್ಲದೆ ಬೇರೇನೂ ಅಲ್ಲ. ಇದು ಭಾರತ ಭೂಮಿಗೆ ನೀಡಬೇಕಾದ ಸಾಲದ ಹೊರೆಯಂತು ಅಲ್ಲವೇ ಅಲ್ಲ. ಏಕೆಂದರೆ ನಮ್ಮ ಭಾರತ ವಿವಿಧತೆಯಲ್ಲಿ ಏಕತೆಯ ನಾಡು. ಇಲ್ಲಿ ಎಲ್ಲಾ ಧರ್ಮೀಯರು ಸೌಹಾರ್ದತೆಯಿಂದ ಬಾಳಬೇಕೆಂದು ಸಾವಿರಾರು ಇತಿಹಾಸವಿರುವ ಈ ಭೂಮಿ ಸಾರುತ್ತಾ ಬಂದಿದೆ. ಆದರೆ ಕಾಲಾದೀಚೆಯಿಂದ ಅದು ಮರೀಚಿಕೆಯಾಗುತ್ತಿರುವುದು ನಮ್ಮ ದೌರ್ಭಾಗ್ಯ ಅನ್ನಬೇಕಷ್ಟೇ…

ಇಲ್ಲಿ ಸೂಕ್ಷ್ಮವಾಗಿ ಚಿಂತಿಸಿದರೆ ತಿಳಿಯುವ ವಿಷಯವೇನೆಂದರೆ ಈ ಭೂಮಿಗೆ ಪರಸ್ಪರ ಕೊಡು ಕೊಳ್ಳುವಿಕೆಯನ್ನು ಈ ರೀತಿ ಗುರುತಿಸಬೇಕಾದ ಅಗತ್ಯವಿದೆಯೇ ? ಸುಂದರ ಭಾರತವನ್ನು ಕುರೂಪಗೊಳಿಸಲು ಕಾರಣವಾದವರಾದರೋ ಯಾರು ? ಅವರು ಭಾರತೀಯರಲ್ಲವೇ ? ಪ್ರಜೆಗಳ ಸಂರಕ್ಷಣೆಯ ಹೊಣೆಯನ್ನು ಮುಂದಾಗಿ ನಿಂತು ಮಾಡಬೇಕಾದವರು ಯಾರು ? ಕೇವಲ ಕೋಮು ದ್ವೇಷದಿಂದ ಸುಡುವ ಭೂಮಿಯನ್ನು ತಂಪುಗೊಳಿಸಲು ಸಾಧ್ಯವೇ ? ಆದರೂ ಈ ನನ್ನ ನೆಲದಲ್ಲಿ ಸಹೃದಯಿಗಳ ಸಂಖ್ಯೆ ಬೆಳೆಯುತ್ತಿರುವುದು ಹೃದಯ ತುಂಬುವ ಸಂಗತಿ. ತನ್ನವರನ್ನು ಅದೆಷ್ಟೇ ಮರ್ದಿಸಿದರೂ , ಶೋಷಣೆಗೈದರೂ ಅದರ ಹಗೆಯನ್ನು ಮನದೊಳಗೆ ಒಂದಿನಿತೂ ನುಸುಳಲು ಬಿಡದೆ ಪರಸ್ಪರ ಸಹಾಯ ಹಸ್ತ ಚಾಚಲು ಮುಂದಾಗುತ್ತಿರುವುದು ಪ್ರಶಂಸನೀಯ. ಯಾಕೆಂದರೆ ಸಣ್ಣಂದಿನಿಂದಲೂ ಅವರು ಕಲಿತ ಶಿಕ್ಷಣವದು. ಅದುವೇ ಅವರ ಸಂಸ್ಕಾರ. ಆ ಸಂಸ್ಕಾರದ ಮೇಲೆ ಸಂಶಯದ ಬೀಜ ಬಿತ್ತಲು ಪ್ರಯತ್ನಿಸುವುದನ್ನು ಇನ್ನಾದರು ಬಿಟ್ಟು ಬಿಡಿ. ಅನಾಥವಾಗಿ ಉಳಿಯುತ್ತಿರುವ ಶವಗಳಿಗೆ ಅಂತ್ಯ ಸಂಸ್ಕಾರ ಮಾಡಲು ಸ್ಮಶಾನಕ್ಕೆ ಪ್ರವೇಶ ನೀಡಬಾರದೆಂಬ ಕೆಟ್ಟ ಹಟವನ್ನು ನಿಲ್ಲಿಸಿ ಅವರಿಗೂ ಕೈ ಜೋಡಿಸಲು ಅವಕಾಶ ನೀಡಬೇಕಾದದು ಅಗತ್ಯ. ಇಂತಹ ಸಂದರ್ಭದಲ್ಲಿ ಅಲ್ಲಿಯ ಜನರು ತಡೆಯ ಬಂದವರನ್ನೇ ಸ್ಮಶಾನ ಭೂಮಿಯಿಂದ ಓಡಿಸಿರುವುದು ಒಂದಾಗಿ ಬಾಳಲು ಸ್ಥಿತಪ್ರಜ್ಞೆಯೊಂದಿಗೆ ತಯಾರಾಗಿರುವುದು ಅಭಿನಂದನಾರ್ಹ. ಇನ್ನಾದರು ಜನರು ಪಾಠ ಕಲಿಯುವಂತಾಗಲಿ.

1 COMMENT

  1. ಉತ್ತಮ ಲೇಖನ. ?
    ಪ್ರಬುದ್ದ ಹಾಗೂ ವೈಚಾರಿಕ ಲೇಖನಗಳಿಂದ #ಇಂಕ್ ಡಬ್ಬಿ ತುಂಬಾ ಆಪ್ತವೆನಿಸುತ್ತದೆ.

LEAVE A REPLY

Please enter your comment!
Please enter your name here