ಲೇಖಕರು: ಇಸ್ಮತ್ ಪಜೀರ್

ಯಾವುದೇ ಹೊಸ ಟ್ರಾಫಿಕ್ ನಿಯಮಾವಳಿಗಳು(ದಂಡ ನೀತಿ)ಜಾರಿಗೆ ಬರಲಿ ಅದರ ಅತೀ ಹೆಚ್ಚು ದುರ್ಲಾಭ ಪಡೆಯುವವರು ಪೋಲೀಸರು ಎನ್ನುವ ಬಗ್ಗೆ ಭಾರತದ ಯಾವೊಬ್ಬ ಪ್ರಜೆಗೂ ಸಂಶಯವಿರಲಾರದು. ಅಷ್ಟರ ಮಟ್ಟಿಗೆ ಪೋಲೀಸ್ ಇಲಾಖೆಯ ಭ್ರಷ್ಟಾಚಾರ ಕುಪ್ರಸಿದ್ಧ.
ಇತ್ತೀಚೆಗೆ ಕೇಂದ್ರ ಸರಕಾರ ಜಾರಿಗೆ ತಂದ ಹೊಸ “ದಂಡ ನೀತಿ” ಯ ಹಿಂದಿನ ಉದ್ದೇಶ ಮುಳುಗುತ್ತಿರುವ ಭಾರತದ ಆರ್ಥಿಕತೆಗೆ ಆಸರೆ ನೀಡಲು. ಅದರಿಂದ ಆಸರೆ ನೀಡಲು ಸಾಧ್ಯವೇ ಎಂಬ ಪ್ರಶ್ನೆ ಖಂಡಿತಾ ಉದ್ಭವಿಸಬಹುದು. ನಮ್ಮಲ್ಲಿ ಬಹಳ ಪ್ರಸಿದ್ಧ ಉಕ್ತಿಯೇ ಇದೆಯಲ್ವಾ… ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆ…!!

ಹೊರನೋಟಕ್ಕೆ ಕಾಣುವಾಗ ಇಂತಹ ನೀತಿಗಳಿಂದ ಜನಸಾಮಾನ್ಯರು ಹೆದರಿ ನಿಯಮಬಾಹಿರವಾಗಿ ವಾಹನ ಚಲಾಯಿಸಲಾರರು ಎಂದೆನಿಸಬಹುದು. ಆದರೆ ಖಂಡಿತವಾಗಿಯೂ ಇದರಿಂದ ಕಾನೂನು ಉಲ್ಲಂಘಿಸುವವರನ್ನು ತಡೆಯಲಾಗದು.ಅದಕ್ಕೆ ತಕ್ಕಂತೆಯೇ ನಮ್ಮ ಪೋಲೀಸ್ ವ್ಯವಸ್ಥೆಯೂ ಇದೆ.
ಎಂತಹದ್ದೇ ಪ್ರಾಮಾಣಿಕ ವ್ಯಕ್ತಿಯಾಗಿರಲಿ, ಆತ ಕಾನೂನು ಉಲ್ಲಂಘಿಸಿದ ಕಾರಣಕ್ಕೆ ಐದೋ-ಹತ್ತೋ ಸಾವಿರ ದಂಡ ವಿಧಿಸಿದಾಗ ಅದನ್ನು ಕಡಿತಗೊಳಿಸಲು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾದಾಗ ಅಡ್ಡ ಹಾದಿಯ ಬಗ್ಗೆ ಯೋಚಿಸಿಯೇ ಯೋಚಿಸುತ್ತಾನೆ. ಐದೋ-ಹತ್ತೋ‌ ಸಾವಿರ ದಂಡಕ್ಕೆ ಬದಲು ಒಂದೋ-ಎರಡೋ ಸಾವಿರದಲ್ಲಿ ಕೆಲಸ ಮುಗಿಯುವುದಾದರೆ ಸಹಜವಾಗಿಯೇ ಜನರ ಆಯ್ಕೆ ಎರಡನೆಯದ್ದಾಗಿರುತ್ತದೆ. ಪೋಲೀಸರಿಗೆ ಲಂಚ ತಿನ್ನಬೇಕೆಂದಿದ್ದರೆ ಅವರು ಹೇಗಾದರೂ ಮಾಡಿ ವಸೂಲು ಮಾಡುತ್ತಾರೆ.ಅದಕ್ಕೆ ವಾಹನ ಚಾಲಕ ನಿಯಮ ಉಲ್ಲಂಘಿಸಬೇಕೆಂದೇನಿಲ್ಲ. ಎಲ್ಲಾ ದಾಖಲೆಪತ್ರಗಳು ಸರಿಯಾಗಿದ್ದು, ನೂರು ಶೇಕಡಾ ನಿಯಮಾಧಾರಿತವಾಗಿ ವಾಹನ ಚಲಾಯಿಸಿದರೂ “ಅತೀ ವೇಗದ ಚಾಲನೆ” ಎಂದು ಕೇಸು ದಾಖಲಿಸಿ ದಂಡ ವಸೂಲಿ ಮಾಡುವುದು ಕಷ್ಟವೇನಲ್ಲ. ಹಾಗೆ ದಂಡ ವಸೂಲಿ ಮಾಡ ಹೊರಟಾಗ ದಂಡದ ಮೊತ್ತ ದೊಡ್ಡದಿದ್ದರೆ ಅದರ ಹತ್ತೋ-ಇಪ್ಪತ್ತೋ ಶೇಕಡಾ ಲಂಚ ಕೊಟ್ಟರೆ ಕೆಲಸವಾಗುತ್ತದೆ ಎಂದು ಸಹಜವಾಗಿಯೇ ಜನಸಾಮಾನ್ಯನೂ ಲಂಚ ನೀಡಲು ತಯಾರಾಗುತ್ತಾನೆ.

ನಿಮ್ಮ ಎಲ್ಲಾ ದಾಖಲೆಗಳೂ ಸಮರ್ಪಕವಾಗಿದ್ದು ನಿಮ್ಮಲ್ಲಿ ಪೋಲೀಸರು ದರ್ಪದ ಮಾತನಾಡಿದಾಗ ಸಹಜವಾಗಿಯೇ ನೀವು ಸಿಟ್ಟಾಗುತ್ತೀರಿ. ಆಗ ಏನಿಲ್ಲವೆಂದರೂ ಪೋಲೀಸರ ಕೆಲಸಕ್ಕೆ ಅಡ್ಡಿ ಅಥವಾ ಪೋಲೀಸರೊಂದಿಗೆ ಅನುಚಿತ ವರ್ತನೆ ಎಂದೂ ಕೇಸು ದಾಖಲಿಸಲು ಅವರಿಗೆ ಅನುಕೂಲವಾಗುತ್ತದೆ.

ಸಾಮಾನ್ಯವಾಗಿ ತಿಂಗಳಾಂತ್ಯಕ್ಕೆ ಠಾಣೆಯ ಪೋಲೀಸರು ರಸ್ತೆ ಬದಿ ನಿಂತು ತಪಾಸಣೆ ಮಾಡುತ್ತಾರೆ. ಅವರಲ್ಲಿ ಈಗೇನಿದು ಏಕಾಏಕಿ ತಪಾಸಣೆ ಎಂದರೆ ಕೇಸು ಭರ್ತಿಯಾಗಲಿಲ್ಲ ಎನ್ನುವ ಉತ್ತರ ನೀಡುವುದನ್ನು ನಮ್ಮಲ್ಲಿ ಅನೇಕರು ಕೇಳಿರಬಹುದು. ಎಂತಹಾ ವಿಚಿತ್ರ ನೋಡಿ. ತಿಂಗಳ ಕೋಟಾದ ಕೇಸು ಭರ್ತಿಯಾಗಲಿಲ್ಲವಂತೆ. ಏನಿದರ ಅರ್ಥ…? ಜನ ಕಾನೂನು ಉಲ್ಲಂಘಿಸಿಯಾದರೂ ಇವರ ತಿಂಗಳ ಕೋಟಾ ಭರ್ತಿಯಾಗಬೇಕೇ…? ಯಾವೊಂದು ದೇಶದ ಕಾನೂನು ವ್ಯವಸ್ಥೆಯೂ ಜನ ಕಾನೂನು ಮುರಿಯಬೇಕೆಂದು ಬಯಸದು.. ಆದರೆ ಈ ಕೇಸಿನ ಕೋಟಾ ಭರ್ತಿ ಮಾಡುವ ಪೋಲೀಸರು ಮತ್ತು ಸಂಬಂಧಪಟ್ಟ ಇಲಾಖೆ ಜನ ಕಾನೂನು ಮುರಿಯಬೇಕೆಂದು ಬಯಸುತ್ತದೆ…!!!

ಪೋಲೀಸರಿಗೆ ಕೇಸು ಹಾಕಿ ದಂಡ ವಸೂಲಿ ಮಾಡಲೋ… ದಂಡದ ಬೆದರಿಕೆ ಹಾಕಿ ಲಂಚ ತಿನ್ನಲೋ ನೀವು ನಿಯಮಗಳನ್ನು ಮುರಿಯಬೇಕೆಂದಿಲ್ಲ. ಸಿಗ್ನಲ್‌ನಲ್ಲಿ ವಾಹನ ನಿಲ್ಲಿಸುವಾಗ ತಕ್ಷಣಕ್ಕೆ ಸಿಗ್ನಲ್ ಲೈಟ್ ಉರಿದದ್ದು ತಿಳಿಯದೇ ತುಸು ತಡಬಡಾಯಿಸಿದರೂ ಸಾಕು ,ಪೋಲೀಸರು ಒಂದೋ ನಿಮ್ಮಿಂದ ಲಂಚ ವಸೂಲಿ ಮಾಡುತ್ತಾರೆ, ಅದು ಸಾಧ್ಯವಾಗದಿದ್ದರೆ ದಂಡ ಹಾಕಿಯಾದರೂ ನಿಮ್ಮನ್ನು ಸತಾಯಿಸುತ್ತಾರೆ.

ಕೆಲವೊಮ್ಮೆ ಪೋಲೀಸರು ಬೆಳಗ್ಗೆಯೇ ತಪಾಸಣೆಗೆಂದು ರಸ್ತೆ ಬದಿ ನಿಂತು ಎಲ್ಲಾ ವಾಹನಗಳನ್ನು ನಿಲ್ಲಿಸುತ್ತಾರೆ. ನಿಮಗೆ ನಿಮ್ಮ ಉದ್ಯೋಗಕ್ಕೆ ತೆರಳಲು ತಡವಾಯಿತೆಂದು ನೀವು ಅವರು ವಾಹನ ನಿಲ್ಲಿಸಲು ನೀಡಿದ ಸೂಚನೆಯನ್ನೂ ಲೆಕ್ಕಿಸದೇ ವಾಹನ ಚಲಾಯಿಸಿ ಮುಂದೆ ಹೋದರೆ ನಿಮ್ಮ ವಾಹನದ ಸಂಖ್ಯೆ ನೋಟ್ ಮಾಡಿ ನಿಮ್ಮ ಮನೆಗೆ ನೋಟೀಸ್ ಕಳುಹಿಸುತ್ತಾರೆ. ನಿಮ್ಮ ಎಲ್ಲಾ ದಾಖಲೆಗಳು ಸಮರ್ಪಕವಾಗಿದ್ದರೂ ಅವರು ತಪಾಸಣೆಗೆಂದು ನಿಂತಾಗ ನೀವು ವಾಹನ ನಿಲ್ಲಿಸಲೇಬೇಕು.ಅನೇಕ ಬಾರಿ ಸಾಲು ಸಾಲಾಗಿ ವಾಹನಗಳನ್ನು ತಡೆದು ನಿಲ್ಲಿಸಿದ್ದರ ಪರಿಣಾಮ ಟ್ರಾಫಿಕ್ ಜಾಮ್ ಆಗುವುದೂ ಇದೆ. ಜನರು ಅನುಭವಿಸುವ ಬವಣೆಯಂತೂ ಕೇಳುವುದೇ ಬೇಡ.
ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ತಮ್ಮದೇ ವಾಹನಗಳಲ್ಲಿ ಕೊಂಡೊಯ್ಯುವ ಹೆತ್ತವರು ಬೆಳಿಗ್ಗೆ ಒಂಬತ್ತೂವರೆಗೆ ಮಕ್ಕಳನ್ನು ಶಾಲೆ/ಕಾಲೇಜಿಗೆ ತಲುಪಿಸಬೇಕಾಗುತ್ತದೆ. ಎಲ್ಲಾದರೂ ದಾರಿಯಲ್ಲಿ ಪೋಲೀಸರು ತಪಾಸಣೆ ಮಾಡುತ್ತಿದ್ದರೆ ಅವರ ಸಮಯ ಅಲ್ಲೇ ವ್ಯರ್ಥವಾಗಿ ಮಕ್ಕಳು ತಡವಾಗಿ ತರಗತಿಗೆ ತಲುಪುವುದು, ಪರೀಕ್ಷಾ ದಿನಗಳಾದರೆ ಮಕ್ಕಳು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತವಾಗುವುದೂ ಇದೆ.

ಪೋಲೀಸರ ತಪಾಸಣೆಯಿಂದ ಜನರ ದುಡಿಮೆಗೂ ಕುತ್ತು ಬರುವುದಿದೆ.
ಅದೆಷ್ಟೋ ಸಂಸ್ಥೆಗಳಲ್ಲಿ ಹಾಜರಿ ಹಾಕಲು ಬಯೋಮೆಟ್ರಿಕ್ ವ್ಯವಸ್ಥೆಯಿರುತ್ತದೆ. ಅಲ್ಲೆಲ್ಲಾ ಸಮಯ ಮೀರಿ ಪಂಚ್ ಮಾಡಿದರೆ ಅರ್ಧ ದಿನದ ವೇತನ ಕಡಿತವಾಗುತ್ತದೆ.
ಈಗೀಗ ಕೆಳಮಧ್ಯಮ ವರ್ಗದ ಕೂಲಿ ಅಥವಾ ಶ್ರಮಜೀವಿಗಳ ಕೈಯಲ್ಲೂ ದ್ವಿಚಕ್ರವಾಹನಗಳಿರುತ್ತವೆ. ಅವರು ಪೋಲೀಸರ ತಪಾಸಣೆಯಿಂದಾಗಿ ಕೆಲಸಕ್ಕೆ ತಲುಪಲು ಒಂದರ್ಧ ಗಂಟೆ ತಡವಾದರೆ ಒಂದಿಡೀ ದಿನದ ಕೆಲಸಕ್ಕೆ ಕುತ್ತು.

ಒಟ್ಟಿನಲ್ಲಿ ಪ್ರಸ್ತುತ ಜಾರಿಗೆ ತರಲಾದ ದಂಡ ನೀತಿ ಅತ್ಯಂತ ಅವೈಜ್ಞಾನಿಕ. ಇದನ್ನು ಪೋಲೀಸರ ಕಿಸೆ ದುಂಡಗಾಗಿಸುವ ಕಾನೂನೆಂದರೂ ತಪ್ಪಲ್ಲ. ಅಥವಾ ಮಿತಿ ಮೀರಿದ ದಂಡವನ್ನು ಪ್ರಭುತ್ವ ಮಾಡುವ
ಕಾನೂನು ಬದ್ಧ ಸುಲಿಗೆಯೆಂದರೂ ಸರಿ.

(ಪ್ರಾಮಾಣಿಕ ಪೋಲೀಸರ ಕ್ಷಮೆಯಿರಲಿ)

LEAVE A REPLY

Please enter your comment!
Please enter your name here