– ಮಹಮ್ಮದ್ ಶರೀಫ್ ಕಾಡುಮಠ

‘ರಸವಾದಿ’, ಪೋರ್ಚುಗೀಸ್ ಲೇಖಕ ಪಾವ್ಲೋ ಕೊಯ್ಲೋ ಅವರ ಸುಪ್ರಸಿದ್ಧ ಕಾದಂಬರಿ ‘ದಿ ಅಲ್ಕೆಮಿಸ್ಟ್’ ನ ಕನ್ನಡ ಅನುವಾದ. ಕನ್ನಡದ ಲೇಖಕ ಅಬ್ದುಲ್ ರಹೀಮ್ ಟೀಕೆಯವರು ಈ ಅನುವಾದವನ್ನು ಬಹಳ ಸುಂದರವಾಗಿ, ಸರಳ ಭಾಷಾ ಶೈಲಿಯಲ್ಲಿ ಅಚ್ಚುಕಟ್ಟಾಗಿ ಮಾಡಿದ್ದಾರೆ. 1988ರಲ್ಲಿ ಮೊದಲು ರಚಿಸಲ್ಪಟ್ಟ ‘ದಿ ಅಲ್ಕೆಮಿಸ್ಟ್’, ಜಗತ್ತಿನ 80ರಷ್ಟು ಭಾಷೆಗಳಿಗೆ ಅನುವಾದಗೊಂಡಿದ್ದಲ್ಲದೆ 190 ಮಿಲಿಯಕ್ಕಿಂತಲೂ ಹೆಚ್ಚು ಪ್ರತಿಗಳ ಮಾರಾಟದಿಂದ ಗಿನ್ನೆಸ್ ದಾಖಲೆ ನಿರ್ಮಿಸಿದೆ ಎಂದಾದ ಮೇಲೆ ಇದೊಂದು ಅದ್ಭುತ ಕಾದಂಬರಿ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ರಸವಾದಿ, ಒಮ್ಮೆ ಓದುವುದಕ್ಕೆ ಕುಳಿತರೆ ಕತೆ ಪೂರ್ತಿ ಮುಗಿಯದೆ ಮನಸ್ಸು ನಮ್ಮನ್ನು ಕದಲುವುದಕ್ಕೆ ಬಿಡುವುದಿಲ್ಲ. ಅಷ್ಟು ಸುಂದರ ಮತ್ತು ರೋಚಕವಾದ ಕತೆಯಿದು. ಸ್ಪೇನ್ನ ಅಂಡಾಲೂಸಿಯಾದ ಸಾಂಟಿಯಾಗೋ ಎಂಬ ಕುರುಬ ಹುಡುಗನೊಬ್ಬನ ಬದುಕಿನ ರೋಚಕ ಕತೆಯನ್ನು ಲೇಖಕ ಪ್ರತಿಯೊಬ್ಬರ ಬದುಕಿಗೆ ಪ್ರೇರಣೆಯಾಗುವಂತೆ ಕಟ್ಟಿಕೊಟ್ಟಿದ್ದಾರೆ.
ತಾನು ಕಂಡ ಕನಸನ್ನು ಸಾಧಿಸುವ ಸಲುವಾಗಿ ಪಾದ್ರಿಯಾಗಬೇಕೆಂಬ ಹೆತ್ತವರ ಬಯಕೆಯನ್ನು ಬದಿಗಿಟ್ಟು ಕುರುಬನಾಗಿ ಬದುಕು ಆರಂಭಿಸುವುದರಿಂದ ಹಿಡಿದು, ಮುಂದೆ ಸಿಗುವ ತಾರಿಫಾ ನಗರದ ಕನಸುಗಳನ್ನು ವ್ಯಾಖ್ಯಾನಿಸುವ ಮುದುಕಿ, ಮಲೆಕ್ಸದೀಕ್ ಎಂಬ ಹೆಸರಿನ, ಜೆರುಸಲೆಮ್ನ ರಾಜನೆಂದು ಪರಿಚಯಗೊಂಡು, ಅವನ ಕನಸಿಗೆ ದಾರಿದೀಪವಾಗುವ ವೃದ್ಧ, ತುಪ್ಪಟ ವ್ಯಾಪಾರಿ ಮತ್ತು ಆತನ ಮಗಳು, ಸ್ಫಟಿಕದ ವ್ಯಾಪಾರಿ, ರಸವಾದಿಯನ್ನು ಹುಡುಕುತ್ತಾ ಮರುಭೂಮಿಯವರೆಗೆ ಬಂದ ಆಂಗ್ಲವ್ಯಕ್ತಿ, ಒಂಟೆ ನಡೆಸುವಾತ, ರಸವಾದಿ, ಹೀಗೆ ಇಲ್ಲಿ ಬರುವ ಎಲ್ಲಾ ಪಾತ್ರಗಳೂ ಬದುಕಿನ ಕುರಿತು ಸುಂದರವಾಗಿ ಮಾತನಾಡುತ್ತವೆ.

ಕೆಲವೊಂದು ವೌಲ್ಯಯುತ ಮಾತುಗಳನ್ನು ಮನಸ್ಸಿನಲ್ಲಿ ಅಚ್ಚೊತ್ತಿ ಉಳಿಯುವಂತೆ ಮತ್ತೆ ಮತ್ತೆ ಬಳಸಿದ್ದಾರೆ. ಓದುತ್ತಾ ಹೋದಂತೆ ಅಂತಹ ವಾಕ್ಯಗಳು ಬದುಕಿಗೆ, ಮನಸ್ಸಿಗೆ ತೀರಾ ಹತ್ತಿರವಾಗಿ ಬಿಡುತ್ತದೆ. ಬದುಕಿನ ಕುರಿತು ನಮ್ಮ ಉತ್ಸಾಹವನ್ನು ಕುಂದದಂತೆ ಮಾಡುತ್ತದೆ. ಈ ರೀತಿ ಬದುಕು ಬದಲಾಯಿಸುವಂತಹ ಕತೆಗಳನ್ನು ಸಮಾಜಕ್ಕೆ ನೀಡುವುದೆಂದರೆ ಅದು ಲೇಖಕರು ಆತ್ಮಾರ್ಥವಾಗಿ ಸಲ್ಲಿಸುವ ಸೇವೆ.
ಯಶಸ್ಸಿನ ಹಾದಿಯಲ್ಲಿ ಆಗಾಗ ಎದುರಾಗುವ ಪರೀಕ್ಷೆಯಂತಹ ಕಷ್ಟಗಳಿಗೆ ಬೇಸತ್ತು ಪ್ರಯತ್ನಗಳನ್ನು ನಿಲ್ಲಿಸುವವರಿರುತ್ತಾರೆ. ಈ ಪುಸ್ತಕ ಅಂಥವರಿಗೆ ಉತ್ಸಾಹ ತುಂಬುವಂತೆ ಮಾಡುತ್ತದೆ. ‘‘ನೀನೇನಾದರೂ ಆತ್ಮಾರ್ಥವಾಗಿ ಬಯಸಿದರೆ ಅದನ್ನು ಸಾಧಿಸಿಕೊಡಲು ಇಡೀ ಬ್ರಹ್ಮಾಂಡವೇ ನಿನ್ನ ಜೊತೆ ಸಂಚು ಹೂಡಿ ಸಹಕರಿಸುತ್ತದೆ’’. ‘‘ಬದುಕಲ್ಲಿ ಏಳುಬೀಳುಗಳನ್ನು ಸಮಾನವಾಗಿ ಸ್ವೀಕರಿಸು ಏಕೆಂದರೆ, ಏಳುಬೀಳುಗಳು ಶಾಪವಲ್ಲ, ವರ’’. ಮತ್ತು ‘‘ನಿನ್ನ ಹೃದಯವೆಲ್ಲಿದೆಯೋ ಅಲ್ಲೇ ನಿನ್ನ ಸಂಪತ್ತು ಕೂಡಾ ಇರುತ್ತದೆ’’. ಇಂತಹ ಸಾಲುಗಳು ಬದುಕಿನ ಬಗ್ಗೆ ಭರವಸೆಯನ್ನು ಗಟ್ಟಿಗೊಳಿಸುತ್ತವೆ. ಸೋಲನ್ನೇ ಸೋಲಿಸಬಲ್ಲ ಶಕ್ತಿ ಒಬ್ಬ ಸಾಮಾನ್ಯನಲ್ಲೂ ಇರಬಹುದು ಎಂಬುದನ್ನು ಈ ಕೃತಿ ಒಬ್ಬ ಕುರುಬ ಹುಡುಗನನ್ನು ಕಥಾನಾಯಕನಾಗಿಟ್ಟುಕೊಂಡು ಮನದಟ್ಟಾಗಿಸುವ ಪ್ರಯತ್ನ ಮಾಡುತ್ತದೆ. ವೈಯಕ್ತಿಕ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಹೊರಟ ಹುಡುಗ ಸಂಪತ್ತನ್ನು ಹುಡುಕುತ್ತಲೇ ಕಥೆ ಸಾಗುತ್ತದೆ. ಆ ನಡುವೆ ಆತನ ಅನುಭವಗಳು ತನ್ನ ಸಾಧನೆಗೆ ಹೇಗೆ ಪೂರಕವಾಗುತ್ತದೆ ಎಂಬುವುದು ‘‘ಇಡೀ ಬ್ರಹ್ಮಾಂಡವೇ ನಿನ್ನ ಜೊತೆ ಸಂಚು ಹೂಡಿ ಸಹಕರಿಸುತ್ತದೆ’’ ಎಂಬ ವಾಸ್ತವ ಸತ್ಯವನ್ನು ನೆನಪಿಗೆ ತರುತ್ತದೆ.
ಗುಪ್ತ ಸಂಪತ್ತನ್ನು ಹುಡುಕುವುದಕ್ಕೆಂದು ಹುಡುಗ ಮಾಡುವ ಹಲವು ರೀತಿಯ ಪ್ರಯತ್ನಗಳು, ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಅವುಗಳಿಂದಾಗಿ ಆತ ತಿಳಿದುಕೊಳ್ಳುವ ವಿಶ್ವಭಾಷೆ, ವಿಶ್ವಾತ್ಮದಂತಹ ಪರಿಕಲ್ಪನೆಗಳು ಬದುಕು ಎಷ್ಟೊಂದು ಸಣ್ಣದು ಎಂದಾದರೂ ಆ ‘ಸಣ್ಣದು’ ಎಂಬುವುದರೊಳಗಿನ ಅತಿವಿಶಾಲ ಲೋಕದ ಸಾಮಾನ್ಯ ಸತ್ಯವನ್ನು ಈ ಕತೆ ಸದ್ದಿಲ್ಲದೇ ತಿಳಿಸುತ್ತಾ ಹೋಗುತ್ತದೆ. ಇಲ್ಲಿ ಜಾತಿಗಳಿಗಾಗಿ, ಧರ್ಮಗಳಿಗಾಗಿ ಜಗಳವಿಲ್ಲ, ಕಾದಾಟವಿಲ್ಲ. ಆದರೆ ಬದುಕಿಗೆ ಬೇಕಾದ ಅಮೂಲ್ಯ ಪಾಠಗಳಿವೆ. ಸಾಮಾನ್ಯವಾಗಿ ಕೆಲವೊಂದು ಕಾದಂಬರಿಗಳು ಓದುತ್ತಾ ‘ಏನೇ ಆದರೂ ಇದೊಂದು ಕತೆ ತಾನೆ ?’ ಎಂದೆನ್ನಿಸುವುದುಂಟು. ಆದರೆ ‘ರಸವಾದಿ’ ನಿಜಕ್ಕೂ ಬರೀ ಕತೆಯಾಗದೆ ಓದುತ್ತಾ ಹೋದಂತೆ ದೊರೆಯುವ ಅತ್ಯುತ್ತಮ ಸಂದೇಶಗಳು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳಬೇಕೆಂದು ಖುಷಿಯಿಂದ ನಿರ್ಧರಿಸುವಂತೆ ಮಾಡುತ್ತದೆ. ಈ ಕತೆಯಲ್ಲಿ ಬದುಕಿನ ದಿನಗಳ ಸಾಮಾನ್ಯ ವಿಚಾರಗಳನ್ನು ವರ್ಣಿಸಿದ ರೀತಿ ಇಷ್ಟವಾಗುತ್ತದೆ.
ತುಪ್ಪಟ ವ್ಯಾಪಾರಿಯ ಮಗಳ ಮೇಲೆ ಪ್ರೀತಿ ಹುಟ್ಟಿ ಮತ್ತೆ ಅವಳು ಸಿಗಲಾರಳೆಂದು ಹುಡುಗನಿಗೇ ಅನ್ನಿಸಿಕೊಂಡು ಅದರ ಗೋಜಿಗೆ ಹೋಗದಿರುವುದು, ಯಾರೋ ಬರೆದ ಪುಸ್ತಕದ ಕತೆಗಳನ್ನು ಓದಿ ನೆನಪಿಟ್ಟುಕೊಂಡು ಓದು ಬರಹ ಗೊತ್ತಿಲ್ಲದ ಅವಳ ಮುಂದೆ ತಾನು ರಚಿಸಿದ್ದೆಂದು ಸುಳ್ಳು ಹೇಳಿ ಅವಳನ್ನು ಅಚ್ಚರಿಗೊಳಿಸಬೇಕೆಂಬ ಅವನ ಯೋಚನೆ, ಅವಳಿಗೆ ಹೇಳಲಿಕ್ಕೆಂದೇ ಕೆಲವೊಂದು ಕುತೂಹಲಕರವಾದ ಸಂಗತಿಗಳನ್ನು ಜನರಿಂದ ತಿಳಿದುಕೊಂಡು ಹೋಗುವುದು, ಹೊಸತೇನಾದರೂ ಕಂಡರೆ,ಕಲಿತರೆ ಅವುಗಳ ಕುರಿತು ಅವಳಿಗೆ ತಿಳಿಸಬೇಕೆಂಬ ಕಾತರ, ಅವಳ ಮೇಲಿನ ಅವನ ಪ್ರೀತಿಯ ಕುರಿತು ಕುತೂಹಲ ಸೃಷ್ಟಿಸುತ್ತದೆ. ಇದು ಹುಡುಗಿಯ ಮನಸ್ಸಿನಲ್ಲಿ ಪ್ರೀತಿಗೋಪುರ ನಿರ್ಮಿಸಲು ಹುಡುಗ ಹಾಕುವ ತಳಪಾಯ. ಇವನ್ನೆಲ್ಲಾ ಸುಂದರ ಶೈಲಿಯಲ್ಲಿ ಬಿಡಿ ಬಿಡಿಯಾಗಿ ಹೇಳುವ ಲೇಖಕರು, ಹುಡುಗನ ಮನಸ್ಸಿನ ಬಾಗಿಲು ಮುರಿದು ಕನಸುಗಳನ್ನು ಹೊರಗೆಡಹಿ ಪರೀಕ್ಷಿಸಿ ವಿವರಿಸಿದಂತಿದೆ.

ಕುರಿಗಳು ಮತ್ತು ಪುಸ್ತಕಗಳ ಜೊತೆಗೆ ಉತ್ತಮ ನಂಟು ಬೆಳೆಸಿದ್ದು, ಕುರಿಗಳ ಬದುಕನ್ನು ಆತ ಅರ್ಥಮಾಡಿಕೊಂಡಂತೆ ಕುರಿಗಳೂ ಅವನ ಕುರಿತು ಅರ್ಥಮಾಡಿಕೊಂಡಿವೆಯೆಂಬಂತೆ ಅವನಿಗೆ ಭಾಸವಾಗುತ್ತದೆ. ಪುಸ್ತಕಗಳನ್ನು ಓದುತ್ತಾ ಬದುಕಿನ ನೀರವತೆಯನ್ನು ಇಲ್ಲವಾಗಿಸುವ ಪ್ರಯತ್ನ, ಒಂದು ಹೊಸ ಹವ್ಯಾಸವನ್ನು, ಮನುಷ್ಯರನ್ನು ಹೊರತುಪಡಿಸಿ ಪ್ರಕೃತಿಯ ಬೇರೊಂದು ಜೀವಗಳ ಅಥವಾ ವಸ್ತುಗಳ ಜೊತೆ ಸ್ನೇಹ ಬೆಳೆಸಬೇಕೆಂಬ ಹಂಬಲವನ್ನು ಹುಟ್ಟಿಸುತ್ತದೆ. ವೈಯಕ್ತಿಕ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಕೆಲವೇ ಕೆಲವು ಸವಾಲುಗಳಿರುವಾಗ ಕತೆಯ ಕುರಿತು ಕುತೂಹಲ ಹೆಚ್ಚುತ್ತದೆ. (ಈ ಸಂದರ್ಭ ತೇಜಸ್ವಿಯವರ ‘ಕರ್ವಾಲೊ’ ಕಾದಂಬರಿಯ ಕೊನೆಯ ರೋಚಕ ಕ್ಷಣಗಳನ್ನು ನೆನಪಿಸಿದ್ದು ಸುಳ್ಳಲ್ಲ.) ಜೊತೆಗೆ ಮುಂದಿನ ಒಂದೊಂದು ಕ್ಷಣವೂ ರೋಚಕವೆನಿಸುತ್ತದೆ. ಹುಡುಗ, ಒಮ್ಮೆ ಬಿದ್ದಂತೆ ಮತ್ತೆ ಎದ್ದಂತೆ ಹೀಗೆ ಪ್ರಯತ್ನಗಳ ನಡುವೆ ಪ್ರಯತ್ನ ನಡೆಸುವ ಪರಿ ಕುತೂಹಲ, ರೋಚಕತೆಯ ನಡುವೆಯೂ ಮನಸ್ಸಿನಲ್ಲಿ ಒಂದು ಗಂಭೀರ ಭಾವವನ್ನು ಹುಟ್ಟಿಸುತ್ತದೆ.
ತಾನು ಹುಡುಕಿ ಬಂದ ಸಂಪತ್ತು ತಾನಿದ್ದಲ್ಲೇ ಇತ್ತು ಎಂಬ ಸತ್ಯ ಗೊತ್ತಾದಾಗ, ಒಬ್ಬ ಸೋಮಾರಿಯ ಮುಂದೆ ಸಂಪತ್ತನ್ನು ಗೆದ್ದು ನಿಂತ ಅತೀವ ಸಂತಸದ ಆ ಕ್ಷಣ ಇಡೀ ಕತೆಯ ಸಾರವನ್ನು, ಅದರ ನೀತಿಯನ್ನು ಅರ್ಥವತ್ತಾಗಿ ತಿಳಿಸುವುದಕ್ಕೆ ಶಕ್ತವಾಗಿದೆ. ಹುಡುಗ ಪ್ರೀತಿಸುವ ಹೆಣ್ಣು, ಫಾತಿಮಾಳ ಪಾತ್ರ ‘ಮರುಭೂಮಿಯ ಹೆಣ್ಣು’ಗಳ ಕಥೆಯನ್ನು ಹೇಳುತ್ತದೆ. ಹೀಗೆ ಇಲ್ಲಿ ಬಂದು ಹೋಗುವ ಹಲವು ಪಾತ್ರಗಳು ತಮ್ಮದೇ ಆದ ಕತೆಗಳನ್ನು ಒಳಗೊಂಡಿವೆ. ಒಟ್ಟಿನಲ್ಲಿ ‘ರಸವಾದಿ’ ಅತ್ಯುತ್ತಮ ಕಾದಂಬರಿ ಎನ್ನುವುದರಲ್ಲಿ ಸಂಶಯವಿಲ್ಲ. ಅನುವಾದಕ ಅಬ್ದುಲ್ ರಹೀಮ್ ಟೀಕೆಯವರ ಈ ಪ್ರಯತ್ನ, ಒಂದು ಜಗತ್ಪ್ರಸಿದ್ಧ ಕಾದಂಬರಿಯನ್ನು ಸರಳವಾಗಿ ಯಾವುದೇ ಅಡಚಣೆಯಿಲ್ಲದೆ ಓದಿಸಿಕೊಂಡು ಹೋಗುವಂತೆ ಮಾಡಿದೆ.

ಒಬ್ಬ ಅನುವಾದಕನ ಮುಂದಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಮತ್ತು ಆ ಮೂಲಕ ಕೃತಿಯನ್ನು ಚಂದಗಾಣಿಸುವಲ್ಲಿ ‘ಟೀಕೆ’ಯವರು ಯಶಸ್ವಿಯಾಗಿದ್ದಾರೆ. ಜಗತ್ತು ಓದಿದ ‘ದಿ ಅಲ್ಕೆಮಿಸ್ಟ್’ನ್ನು ಕನ್ನಡದ ಮನಸ್ಸುಗಳು ತಮ್ಮ ಭಾಷೆಯಲ್ಲಿ ಓದುವಂತಾಗಲು ಅನುವಾದಕರು ನಡೆಸಿದ ಈ ಪ್ರಾಮಾಣಿಕ, ಸದುದ್ದೇಶದ ಪ್ರಯತ್ನಕ್ಕೆ ಕೃತಜ್ಞ.

(ಅನುವಾದಕ ಅಬ್ದುಲ್ ರಹೀಮ್ ಟೀಕೆ ಯವರು ಇತ್ತೀಚೆಗೆ ನಿಧನರಾದರು)

LEAVE A REPLY

Please enter your comment!
Please enter your name here