ಲಕ್ಷಾಂತರ ಹಣ ಖರ್ಚು ಮಾಡಿ ಕೊಳವೆ ಬಾವಿ ಕೊರೆಸುವ ಅನೇಕ ದೈವ ಭಕ್ತರು ಧರ್ಮಸ್ಥಳಕ್ಕೋ, ಮಂತ್ರಾಲಯಕ್ಕೋ, ಕುಕ್ಕೆ ಸುಬ್ರಮಣ್ಯಕ್ಕೋ ಒಳ್ಳೆಯ ನೀರು ಸಿಗಲಿ ಎಂದು ಹರಕೆ ಹೊರುತ್ತಾರೆ. ಕೆಲವರು ಕಾಣಿಕೆಯನ್ನೂ ನೀಡುತ್ತಾರೆ. ದುರಾದೃಷ್ಟವಶಾತ್ ಈ ಬಾರಿ ಆ ದೇವರುಗಳೇ ನೀರಿನ ಅಭಾವ ಎದುರಿಸುತ್ತಿವೆ.

ಅನೇಕ ಸಂಕಷ್ಟಗಳಿಗೆ ಪರಿಹಾರ ಒದಗಿಸುತ್ತಾರೆ ಎಂದು ನಂಬಲಾದ ದೇವರುಗಳೇ ಸ್ವತಃ ಕಷ್ಟಕ್ಕೆ ಒಳಗಾಗಿದ್ದಾರೆ. ಎಲ್ಲಾ ಧರ್ಮದ ಎಲ್ಲಾ ದೇವರುಗಳಿಗೂ ಇದು ಅನ್ವಯ.

ಇದು ವ್ಯಂಗ್ಯವಲ್ಲ. ಈ ಅನಿಸಿಕೆಯ ಅರ್ಥವೆಂದರೆ ಬಹುಶಃ ಸೃಷ್ಟಿಯ ವ್ಯವಸ್ಥೆಯಲ್ಲಿ ಪ್ರಕೃತಿಯೇ ಸುಪ್ರೀಂ. ದೇವರು ಧರ್ಮ ಕಾನೂನು ಸಮಾಜ ಎಲ್ಲವೂ ಅದರ ಒಳಗಿನ ಒಂದು ಕೃತಕ ವ್ಯವಸ್ಥೆ ಮಾತ್ರ.

ವಿಪರ್ಯಾಸವೆಂದರೆ, ಸೃಷ್ಟಿಯ ಸಹಜ ಸ್ವಾಭಾವಿಕ ಶಕ್ತಿಗಳನ್ನು ನಾವು ನಿರ್ಲಕ್ಷಿಸಿ ಅದನ್ನು ದುರುಪಯೋಗ ಪಡಿಸಿಕೊಂಡು ನಮ್ಮ ನಿಷ್ಠೆಯನ್ನು ಕೃತಕ ವ್ಯವಸ್ಥೆಗೆ ಬದಲಾಯಿಸಿದ್ದೇವೆ.

ಪ್ರಾರಂಭದಲ್ಲಿ ಇದು ಕೆಲವು ಅನುಕೂಲಕರ ಲಾಭಗಳನ್ನು ಮನುಷ್ಯನಿಗೆ ಒದಗಿಸಿರುವುದು ನಿಜ. ಆದರೆ ದೀರ್ಘಕಾಲದಲ್ಲಿ ಮನುಷ್ಯನ ದುರಾಸೆ ಅತಿಯಾಗಿ ಪ್ರಕೃತಿಯ ವಿರುದ್ಧ ದೌರ್ಜನ್ಯ ಮಾಡಿದ ಫಲವಾಗಿ ಇಂದು ಅವ್ಯವಸ್ಥೆ – ಹಾಹಾಕಾರ ಮತ್ತು ನೆಮ್ಮದಿಯಿಲ್ಲದ ಅಸಹನೆಯ ಅನಾರೋಗ್ಯಕಾರಿ ಜೀವನದತ್ತ ಸಾಗುತ್ತಿದ್ದಾನೆ.

ನಾವು ಲಂಚ ಪಡೆದು ಮೋಸ ವಂಚನೆ ಕೊಲೆ ಮಾಡಿ ಕಾನೂನಿನಿಂದಲೂ ತಪ್ಪಿಸಿಕೊಳ್ಳಬಹುದು, ದೇವರು ಧರ್ಮವನ್ನು ವಂಚಿಸಬಹುದು‌. ಆದರೆ ಪ್ರಾಕೃತಿಕ ನ್ಯಾಯ ದೀರ್ಘ ಅವಧಿಯಲ್ಲಿ ತನ್ನ ಶಿಕ್ಷೆ ನೀಡುವ ಸಾಧ್ಯತೆ ಹೆಚ್ಚು. ಇದು ಸಹ ಸಂಪೂರ್ಣ ಖಚಿತ ಎಂದು ಹೇಳಲು ಸಾಧ್ಯವಿಲ್ಲ.

ಕಾಶಿ, ಮೆಕ್ಕಾ, ವ್ಯಾಟಿಕನ್ ಮುಂತಾದ ಸ್ಥಳಗಳು ಧಾರ್ಮಿಕ ಮಹತ್ವ ಪಡೆದಿರಬಹುದು. ನಂಬುವವರಿಗೆ ಮಾನಸಿಕ ನೆಮ್ಮದಿ ನೀಡಬಹುದು. ಆದರೆ ನಿಜಕ್ಕೂ ಜೀವಿಗಳ ಮತ್ತು ಪ್ರಕೃತಿಯ ಸಹಜ ಸ್ವಾಭಾವಿಕ ಸಮಸ್ಯೆಗಳನ್ನು ನಿಯಂತ್ರಿಸಿ ಅದಕ್ಕೆ ಪರಿಹಾರ ಕೊಡುತ್ತದೆ ಎಂಬುದು ಕೇವಲ ಕಲ್ಪನೆ ಮಾತ್ರ.

ಏನೋ ಅತಿಮಾನುಷ ಮತ್ತು ಕಾಲ್ಪನಿಕ ಕಥೆಗಳನ್ನು ಹೇಳಿ ದೈವ ಶಕ್ತಿಯನ್ನು ಸಮರ್ಥಿಸಬಹುದು ಅಥವಾ ದೇವರ ಸಾಮಾನ್ಯ ಕಲ್ಪನೆಯನ್ನೇ ತಿರುಚಿ ಇನ್ನೇನೋ ಅರ್ಥ ಕೊಡಬಹುದು. ಆದರೆ ಸರ್ವ ಶಕ್ತ, ಸರ್ವಾಂತರ್ಯಾಮಿ, ಸಂಕಷ್ಟಹರ ಮೂರ್ತ ರೂಪದ ದೇವರು ಇರುವುದು ಮಾತ್ರ ಖಂಡಿತ ಸುಳ್ಳು.

ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯ ಇಲ್ಲದಿರುವುದು, ತಮ್ಮ ಅಸ್ತಿತ್ವವೇ ಕುಸಿಯಬಹುದು ಎಂಬ ಭಯ ಧಾರ್ಮಿಕ ನಾಯಕರುಗಳಿಗೆ ಇರುವುದರಿಂದ ಅವರು ವ್ಯವಸ್ಥೆಯ ಅನಾನುಕೂಲಗಳನ್ನು ತಮ್ಮ ಹಿತಾಸಕ್ತಿಗಾಗಿ ಬಳಸಿಕೊಂಡು ಜನರನ್ನು ಶೋಷಿಸುತ್ತಿದ್ದಾರೆ. ದೈವ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಪರಿಹರಿಸುವ ಶಕ್ತಿ ಇಲ್ಲದ ಮೇಲೆ ಇನ್ನು ನಮ್ಮ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೇ.

ದೇವರು ಧಾರ್ಮಿಕ ಸ್ಥಳಗಳು ನಮ್ಮ ಸಂಸ್ಕೃತಿಯ ಭಾಗವಾಗಿರುವುದರಿಂದ ವೈಯಕ್ತಿಕ ನೆಲೆಯಲ್ಲಿ ಅದನ್ನು ಆರಾಧಿಸುವ ಸ್ವಾತಂತ್ರ್ಯ ನಂಬಿಕೆ ಇರುವ ಎಲ್ಲರಿಗೂ ಇದೆ. ಆದರೆ ಸತ್ಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯ ಬಂದಾಗ ಇರುವ ಶಕ್ತಿಯನ್ನು ಉಪಯೋಗಿಸಿ ಅದನ್ನು ನಿವಾರಿಸುವ ಪ್ರಯತ್ನ ಮಾಡದೆ ಇಲ್ಲದಿರುವ ದೇವರ ಶಕ್ತಿಯನ್ನು ನಂಬಿ ಮುಂದಿನ ಪೀಳಿಗೆಯ ಜನರನ್ನು ಕಷ್ಟಕ್ಕೆ ಒಳಪಡಿಸಬಾರದು ಎಂಬ ಕಳಕಳಿ ಮತ್ತು ಎಚ್ಚರಿಕೆ ನಮಗಿರಲಿ ಎಂದು ಆಶಿಸುತ್ತಾ……..

ಇದು ಚುನಾವಣಾ ಫಲಿತಾಂಶಗಳ ಸಮಯ. ಗೆದ್ದವರು ಬೀಗದೆ, ಸೋತವರು ಸೊರಗದೆ ಮುಂದಿನ ದಿನಗಳ ಕೆಲಸ ಪ್ರಾರಂಭಿಸಬೇಕಿದೆ.

ನಮ್ಮೆಲ್ಲರ ಊಹೆಯ ಪ್ರಕಾರ ನೀರಿನ ಸಮಸ್ಯೆ ಮುಂದೆ ಯಾವಾಗಲೋ ಬರಬಹುದು ಎಂಬುದು ಸುಳ್ಳಾಗಿ ಶುದ್ಧ ನೀರು ಇರಲಿ ಸಾಮಾನ್ಯ ನೀರಿನ ಕೊರತೆ ನಮ್ಮ ಕಾಲದಲ್ಲಿಯೇ ಎದುರಿಸುವಂತಾಗಿದೆ. ಇಡೀ ರಾಜ್ಯ ನೀರಿನ ಕೊರತೆಯ ಸಮಸ್ಯೆಗೆ ಸಿಲುಕಿದಂತೆ ಕಾಣುತ್ತಿದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳು ಸೇರಿ ಎಲ್ಲಾ ಮಾಧ್ಯಮಗಳಲ್ಲೂ ನಾವೆಲ್ಲರೂ ಸರ್ಕಾರದ ಮೇಲೆ ಒತ್ತಡ ಹೇರಿ, ಆಡಳಿತದ ಮೊದಲ ಆದ್ಯತೆ ರಸ್ತೆ ವಿದ್ಯುತ್ ವಿಮಾನ ನಿಲ್ದಾಣ, ಶಿಕ್ಷಣ, ಸ್ಮಾರ್ಟ್ ಸಿಟಿ, ಕಂಪ್ಯೂಟರ್ ತಂತ್ರಜ್ಞಾನ ಅಲ್ಲ, ಅದಕ್ಕೆ ಮೊದಲು ಜೀವನಾವಶ್ಯಕ ಮೂಲವಾದ ಪ್ರಾಕೃತಿಕ ಸಂಪನ್ಮೂಲಗಳನ್ನು ಅದರಲ್ಲೂ ಮುಖ್ಯವಾಗಿ ನದಿ ಕೆರೆ , ನೀರಿನ ಮೂಲ ಮತ್ತು ಕಾಡುಗಳನ್ನು ಉಳಿಸುವ ಮತ್ತು ಬೆಳೆಸುವ ಕೆಲಸವನ್ನು ಸಮರೋಪಾದಿಯಲ್ಲಿ ಮಾಡುವಂತೆ ಆಗ್ರಹಿಸೋಣ.

ಪ್ರಜಾಪ್ರಭುತ್ವ ಉಳಿಯುವುದು ಮತದಾನ ಮಾಡುವುದರಿಂದ ಅಲ್ಲ. ಮತ ಪಡೆದು ಆಯ್ಕೆಯಾದ ಪ್ರತಿನಿಧಿಗಳು ಯಾವ ರೀತಿ ಈ ಸಮಾಜ ರಕ್ಷಣೆಗೆ ಬದ್ದತೆ ತೋರುತ್ತಾರೆ ಎಂಬ ಆಧಾರದ ಮೇಲೆ ಅದು ನಿರ್ಧರಿಸಲ್ಪಡುತ್ತದೆ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ.

ಒಂದು ವೇಳೆ ದೇವರು ಇದ್ದರೆ ಇರಲಿ. ನಮಗೇನು. ನಾವು ನಮ್ಮ ಕೆಲಸ ಮಾಡುತ್ತಾ ಸಾಗೋಣ. ಕಲ್ಲು ಮಣ್ಣು ಗಿಡ ಮರಗಳಿಗೆ ರೂಪ ನೀಡಿ ಬಣ್ಣ ಬಳಿದು ಕಡ್ಡಿ ಕರ್ಪೂರ ಅರಿಶಿನ ಕುಂಕುಮ ಬಳಿದು ಅದೇ ದೇವರು ಎಂದು ಜನರನ್ನು ನಂಬಿಸಿ ಅವರು ಶ್ರೀಮಂತರಾಗುತ್ತಾ ಜನರನ್ನು ಶೋಷಿಸುವುದನ್ನು ವಿರೋಧಿಸುವುದು ಮತ್ತು ಜನರಲ್ಲಿ ಜಾಗೃತಿ ಮೂಡಿಸುವುದು ಸಹ ದೇಶಪ್ರೇಮದ ಒಂದು ಭಾಗ ಎಂದು ಭಾವಿಸುತ್ತಾ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ

ವಿವೇಕಾನಂದ. ಹೆಚ್.ಕೆ.

1 COMMENT

LEAVE A REPLY

Please enter your comment!
Please enter your name here