ಲೇಖಕರು: ರಮೇಶ್ ವೆಂಕಟರಾಮನ್

ದೇಶದ ಸಾಂವಿಧಾನಿಕ ಬದ್ಧತೆಯು ಜಾತ್ಯತೀತತೆಯ ಪರಿಕಲ್ಪನೆಯ ವಿಚಾರದಲ್ಲಿ ಗಂಭೀರ ಅಪಾಯದಲ್ಲಿದೆ. ತನ್ನ ಬಲವಾದ ಚುನಾವಣಾ ಆದೇಶವನ್ನು ಹೇರುವ ಮೂಲಕ ಭಾರತದ ಜಾತ್ಯತೀತ ನೀತಿಯನ್ನು ಹಾಳುಮಾಡಲು ನಿರ್ಧರಿಸಿದಂತೆ ಕಂಡುಬರುತ್ತಿರುವ ಬಿಜೆಪಿ ಸರ್ಕಾರವಷ್ಟೇ ಇದಕ್ಕೆ ಕಾರಣವಲ್ಲ. ಬಹಳ ಮುಖ್ಯವಾಗಿ, ಕಳೆದ ಕೆಲವು ವರ್ಷಗಳಿಂದ ಜಾತ್ಯತೀತತೆಯ ಮೇಲಿನ ಸಂದೇಹವು ಗಣನೀಯ ಬೆಳವಣಿಗೆ ಕಂಡಿದೆ.
ಅಮೃತಸರ ಮತ್ತು ಗೋವಾ, ಲಡಾಖ್ ಮತ್ತು ಹೈದರಾಬಾದ್, ಮತ್ತು ದೆಹಲಿ, ಮುಂಬೈ, ಮತ್ತು ಚೆನ್ನೈನಂತಹ ವೈವಿಧ್ಯಮಯ ಸ್ಥಳಗಳನ್ನು ಒಳಗೊಂಡು ಇತ್ತೀಚೆಗೆ ಭಾರತದಾದ್ಯಂತ ನಾನು ಕೈಗೊಂಡ ಪ್ರವಾಸಗಳಲ್ಲಿ, ಮುಸ್ಲಿಂ ವಿರೋಧಿ ಕ್ರಮಗಳ ಇತ್ತೀಚಿನ ಕೋಲಾಹಲ- 370ನೇ ವಿಧಿ ರದ್ದತಿ ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿಸುವುದು, ತ್ರಿವಳಿ ತಲಾಖ್ ನಿಷೇಧ, ಅಯೋಧ್ಯೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು, ಮತ್ತು ಈಗ ಸಿಎಎ/ಎನ್‌ಆರ್‌ಸಿ- ಪಟ್ಟಭದ್ರ ಹಿಂದುತ್ವವಾದಿಗಳಲ್ಲಿ ಮಾತ್ರವಲ್ಲದೆ “ಮಧ್ಯಮ ಧೋರಣೆ” ಹೊಂದಿದವರಲ್ಲಿಯೂ ‘ಇವೆಲ್ಲ ಒಳ್ಳೆಯದು’ ಎಂಬ ಭಾವನೆ ಇರುವುದನ್ನು ಕಂಡು ಆಘಾತಕ್ಕೊಳಗಾಗಿದ್ದೇನೆ.
ಈ ದೊಡ್ಡ ವಲಯವು ಚಿಂತನಶೀಲ, ಧಾರ್ಮಿಕವಲ್ಲದ ಮತ್ತು ಉದಾರ-ಒಲವು ಹೊಂದಿರುವ- ಮುಸ್ಲಿಂ ವಿರೋಧಿಗಳಲ್ಲದ ಹಿಂದೂಗಳನ್ನು ಒಳಗೊಂಡಿದೆ. ಈ ವಿಭಾಗದಲ್ಲಿ ಹೆಚ್ಚಿನವರು ಮೋದಿ- ಷಾ ಅವರ ಕಚ್ಚಾ ಧರ್ಮಾಂಧತೆ ಮತ್ತು ಉನ್ಮಾದದ ರಾಜಕೀಯವನ್ನು ಅಸಹ್ಯವಾಗಿ ಕಾಣುವವರು ಮತ್ತು ಅವರು ‘ಹಿಂದೂ ರಾಷ್ಟ್ರ’ಕ್ಕಾಗಿ ಸಹಿ ಹಾಕುವ ವಿಚಾರದಲ್ಲಿ ದೂರ ನಿಲ್ಲುವವರೇ. ಹಾಗಿದ್ದೂ, ಅವರಲ್ಲಿ ಹಲವರು ಈಗ ಜಾತ್ಯತೀತತೆಯ ಕುರಿತ ಸಂಘಪರಿವಾರದ ವಿಮರ್ಶೆಯನ್ನು ಬೆಂಬಲಿಸುತ್ತಾರೆ. ಹಿಂದೆ ಬಲಪಂಥೀಯರ ಸಂರಕ್ಷಣೆಯ ಅಂಶವಾಗಿದ್ದ, ಮುಸ್ಲಿಮರಿಗಾಗಿ ವಿಶೇಷ ಸವಲತ್ತುಗಳು, ವೈಯಕ್ತಿಕ ಕಾನೂನು, ಅಥವಾ ದೇಶಪ್ರೇಮದ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಕೆಲಸ ಇನ್ನು ಮುಂದೆ ನಿಷೇಧವಲ್ಲ ಮತ್ತು ಅದಕ್ಕೆ ಅನುಗುಣವಾಗಿ ಹಿಂದೂ ಕಾಳಜಿಯನ್ನು ನಿರ್ಲಕ್ಷಿಸಲಾಗಿದೆ ಎಂಬ ಆರೋಪವನ್ನೂ ಮಾಡಲಾಗುತ್ತದೆ. ವಾಸ್ತವವಾಗಿ, ಕಳೆದ ನಾಲ್ಕು ದಶಕಗಳಿಗಿಂತ ಹೆಚ್ಚಾಗಿ ಕಳೆದ ಕೆಲವು ತಿಂಗಳುಗಳಲ್ಲೇ “ಮುಸ್ಲಿಮರ ಕುರಿತ ಪ್ರಶ್ನೆ”ಗಳನ್ನು ಮುಖ್ಯವಾಹಿನಿಯ ಹಿಂದೂಗಳಿಂದ ನಾನು ಹೆಚ್ಚು ಕೇಳಿಸಿಕೊಂಡಿದ್ದೇನೆ.

ಈ ರೀತಿಯ ಅಭಿಪ್ರಾಯಗಳ ಮುಕ್ತ ಅಭಿವ್ಯಕ್ತಿಯು ನನಗೆ, ದೇಶದ ಎಲ್ಲಾ ವರ್ಗದ ಜನರನ್ನು, ಪ್ರಜಾಪ್ರಭುತ್ವದ ಬಗೆಗಿನ ಅವರ ಬದ್ಧತೆಯನ್ನು ಗಂಭೀರವಾಗಿ ಪರೀಕ್ಷಿಸಲು ಕಾರಣವಾದ ತುರ್ತು ಪರಿಸ್ಥಿತಿಯ ಸಮಯವನ್ನು ನೆನಪಿಸುತ್ತದೆ. 1970 ಮತ್ತು 1980ರ ದಶಕದ ಆರಂಭದ, ‘ಬಡವರು, ವಿವಿಧತೆಯ ಮತ್ತು ವಿಭಜಿತ ಭಾರತವು ಸರ್ವಾಧಿಕಾರಿಯೊಬ್ಬರ ಅಡಿಯಲ್ಲಿ ಮಾತ್ರ ಪ್ರಗತಿ ಹೊಂದಬಹುದೇ- ಅಥವಾ ಕನಿಷ್ಠ ಪ್ರಬಲ, ನೇರವಾಗಿ ಚುನಾಯಿತನಾದ, ಕಾರ್ಯನಿರ್ವಾಹಕ ಅಧ್ಯಕ್ಷರಿಂದ ಪ್ರಗತಿ ಕಾಣಬಹುದೇ’ ಎಂಬ ವಾದವನ್ನು ಹಲವರು ನೆನಪಿಸಿಕೊಳ್ಳುತ್ತಾರೆ.
ಅಂತಹ ಚರ್ಚೆಗಳು ಉತ್ತಮವಾಗಿದ್ದವು. ಪರೀಕ್ಷೆಗೊಳಪಡದ ಸಂವಿಧಾನವು ಸುಸ್ಥಿರವಲ್ಲ. ಭಾರತದ ಸಂವಿಧಾನವನ್ನು ಸಂವಿಧಾನ ಸಭೆಯಿಂದ ದೇಶಕ್ಕೆ “ನೀಡಲಾಗಿದೆ”. ಆ ಸಭೆಯ ಸುಮಾರು ಮುಕ್ಕಾಲು ಭಾಗದಷ್ಟು ಸದಸ್ಯರು ಪರೋಕ್ಷವಾಗಿ ಆಯ್ಕೆಯಾಗಿದ್ದರೂ, ವಿಶೇಷ ಅಧಿಕಾರ ಮಾತ್ರ ಸೀಮಿತವಾಗಿತ್ತು. ನಮ್ಮ ಸಂವಿಧಾನವನ್ನು ರೂಪಿಸಿದ್ದು ಬಹುಸಂಖ್ಯೆಯ ಜನರೇನೂ ಅಲ್ಲ. ತುರ್ತುಪರಿಸ್ಥಿತಿ ಹಾಗೂ ಅದರ ಪರಿಣಾಮಗಳು ಇಂದು ಪ್ರಜಾಪ್ರಭುತ್ವದ ಮಹತ್ವವನ್ನು ಜನರಿಗೆ ಮನದಟ್ಟಾಗಿಸಿದೆ. ಯಾರೂ ಕೂಡಾ- ಎಡ, ಬಲ, ಅಥವಾ ಮಧ್ಯಮ- ನಮ್ಮ ಸಂಸದೀಯ ವ್ಯವಸ್ಥೆ ಮತ್ತು sಸಂಯುಕ್ತ ಸ್ವರೂಪದ ಸರ್ಕಾರಕ್ಕೆ ಎದುರಾಗಿ ಸವಾಲೆತ್ತುವುದಿಲ್ಲ. ಜಾತ್ಯತೀತತೆಯೂ ಪ್ರಜಾಪ್ರಭುತ್ವದ ಸ್ಥಾನಮಾನವನ್ನು ಪಡೆಯಬೇಕಿದೆ.
ಕಳೆದ ಕೆಲವು ವರ್ಷಗಳಿಂದ, ಸಂಘ ಪರಿವಾರದ ‘ಸಿಕ್ಯುಲರ್’(ರೋಗಗ್ರಸ್ತ) ವಿರೋಧಿ ಮಾತಿನ ನಗಾರಿ ಸದ್ದು, ಮುಸ್ಲಿಂ ಅಲ್ಪಸಂಖ್ಯಾತರನ್ನು ಹೇಗೆ ಪರಿಗಣಿಸಲಾಗುತ್ತದೆ ಎಂಬುದನ್ನು ಮರುಪರಿಶೀಲಿಸುವಂತೆ ಅನೇಕ ಮುಖ್ಯವಾಹಿನಿಯ ಹಿಂದೂಗಳನ್ನು ಪ್ರೇರೇಪಿಸಿದೆ. ತಾತ್ತ್ವಿಕವಾಗಿ, ಇದು ಜಾತ್ಯತೀತತೆಗೆ ಸಂವಿಧಾನದ ಅನುಮೋದನೆ ಏಕೆ ಇನ್ನೂ ಶ್ರೇಷ್ಠ ಅರ್ಥ ಒದಗಿಸುತ್ತದೆ ಎಂಬುದರ ಕುರಿತು ದೃಢವಾದ ಮತ್ತು ಸ್ಪಷ್ಟತೆಯ ವಿಚಾರವಿನಿಮಯಕ್ಕೆ  ಅನುಕೂಲ ಒದಗಿಸುತ್ತದೆ. ಸಮಸ್ಯೆಯೆಂದರೆ ಭಾರತದ ಜಾತ್ಯತೀತ ನೆಲೆಗಟ್ಟನ್ನು ರಕ್ಷಿಸುವುದರಲ್ಲಿ ಉತ್ಸುಕರಾಗಿರುವವರು ಈ ಚರ್ಚೆಯಲ್ಲಿ ಕಾಣಿಸುವುದಿಲ್ಲ. 

ಜಾತ್ಯತೀತತೆಯ ಬಗ್ಗೆ ಆಳವಾಗಿ ತಿಳಿದಿರುವವರು, ಜಾತ್ಯತೀತತೆಗೆ ಸಂಬಂಧಿಸಿದಂತೆ ಅನುಮಾನ ಹೊಂದಿರುವವರ ಪ್ರಶ್ನೆಗಳಿಗೆ ಉತ್ತರ ನೀಡುವುದನ್ನು ಬಿಟ್ಟು, ಗೋಡ್ಸೆ ಸಂತತಿ ಎಂದು ಟೀಕಿಸುತ್ತ, ಬಲಪಂಥೀಯರನ್ನು ಬಾಯಿಮುಚ್ಚಿಸುವುದರಲ್ಲೇ ತೊಡಗಿದ್ದಾರೆ. ಜಾತ್ಯತೀತತೆಯು ಈ ದೇಶಕ್ಕೆ ಸ್ವಯಂ-ಸ್ಪಷ್ಟವಾಗಿ ಸರಿ ಎಂದು ಜಾತ್ಯತೀತವಾದಿಗಳು ಅಂದುಕೊಳ್ಳುತ್ತಾರೆ. ಪ್ರಶ್ನಾರ್ಹವಾಗಿರುವುದು ಮತ್ತು ಮರು-ನ್ಯಾಯಸಮ್ಮತಗೊಳಿಸುವ ತೀವ್ರವಾದ ಅಗತ್ಯವಿರುವುದು ಈ ದಾಖಲೆಯ ಜಾತ್ಯತೀತ ಒತ್ತಡವಾಗಿದೆ ಎಂದು ಅರಿತುಕೊಳ್ಳದೆ ಅನೇಕ ಸಿಎಎ ವಿರೋಧಿ ಪ್ರತಿಭಟನಾಕಾರರು ಮಾಡುತ್ತಿರುವಂತೆ ಅವರೂ ಸಮರ್ಥನೆಗಾಗಿ ಸಂವಿಧಾನವನ್ನು ಉಲ್ಲೇಖಿಸುತ್ತಾರೆ. 
ಮೋದಿ ಆಡಳಿತದ ಕಾರ್ಯಸೂಚಿಯನ್ನು ಬೆಂಬಲಿಸುತ್ತ ‘ಭಕ್ತರು’, ‘ಸಂಘಿಗಳು’ ಅಥವಾ ‘ಚಡ್ಡಿವಾಲ್ಲಾಗಳು’ ಎಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವವರು ಸ್ವಯಂ-ನ್ಯಾಯಯುತವಾಗಿ ಸಂವಿಧಾನವನ್ನು ದೂರತಳ್ಳುವ ಕ್ರಮವು ಬ್ರಿಟನ್‌ನ ಉದಾರವಾದಿ ಗಣ್ಯರು ಬ್ರೆಕ್ಸಿಟ್ ಯುದ್ಧವನ್ನು ಕಳೆದುಕೊಂಡ ಬಗೆಯನ್ನು ನನಗೆ ನೆನಪಿಸುತ್ತದೆ. ಅವರು ತಮ್ಮ ಕಾಸ್ಮೋಪಾಲಿಟನ್ ವಿಶ್ವದೃಷ್ಟಿಕೋನದ ಸ್ಪಷ್ಟತೆಯನ್ನು ಸಮ್ಮತಿಸಿದರು, ಯುರೋಪ್ ಒಕ್ಕೂಟ(EU) ತೊರೆಯಲು ಮತ ಚಲಾಯಿಸಿದವರನ್ನು ದಾರಿ ತಪ್ಪಿದ ಜಾತಿವಾದಿಗಳು ಮತ್ತು ‘ಪುಟ್ಟ ಇಂಗ್ಲೆಡ್‌ನವರು’ ಎಂದು ಹಣೆಪಟ್ಟಿ ನೀಡಿದರು. ಟ್ರಂಪ್ ಬೆಂಬಲಿಗರ ಬಗ್ಗೆ ಇದೇ ರೀತಿಯ ಮನೋಭಾವವು ಈ ವರ್ಷ ಯುಎಸ್ ಅಧ್ಯಕ್ಷ ಸ್ಥಾನವನ್ನು ಮರಳಿ ಪಡೆಯುವ ಪ್ರಜಾಪ್ರಭುತ್ವವಾದಿ ಪ್ರಯತ್ನಗಳನ್ನು ಪ್ರಭಾವಿಸಲಿದೆ.ಭಾರತದ ಜಾತ್ಯತೀತವಾದಿಗಳು ಇಲ್ಲಿ ಜಾತ್ಯತೀತತೆ ಕುರಿತ ಭಾವನೆಗಳು ತಳಮಟ್ಟದಿಂದಲೇ ಆಳವಾಗಿ ಬದಲಾಗಿವೆ ಎಂಬ ಅಂಶದ ಬಗ್ಗೆ ಎಚ್ಚರಗೊಳ್ಳಬೇಕು. ಬಹುತೇಕ ಮುಖ್ಯವಾಹಿನಿಯ ಹಿಂದೂಗಳು, ಜಾತ್ಯತೀತತೆಯ ಹೆಸರಿನಡಿಯಲ್ಲಿ ತಮ್ಮ ಮೇಲೆ ಸವಾರಿ ಮಾಡಲಾಗುತ್ತಿದೆ ಎಂದು ಭಾವಿಸುತ್ತಾರೆ.
ಈ ಬದಲಾದ ವ್ಯವಸ್ಥೆಯಲ್ಲಿ ದೇಶದ ಜಾತ್ಯತೀತ ಕಲ್ಪನೆಯನ್ನು ಸಂರಕ್ಷಿಸಲು ಜಾತ್ಯತೀತತೆಯ ಪ್ರತಿಪಾದಕರು “ಮಧ್ಯಮ ಪಂಥ” ದವರೊಂದಿಗೆ ತುರ್ತಾಗಿ ಮತ್ತು ಗೌರವಯುತವಾಗಿಯೇ ತೊಡಗಿಸಿಕೊಳ್ಳುವ ಅಗತ್ಯವಿದೆ. ಅವರು ಜಾತ್ಯತೀತತೆಗೆ ಸಂಬಂಧಿಸಿ ಹೊಸತಾದ, ತತ್ವಬದ್ಧವಾದ (ವೈಯಕ್ತಿಕ ಸಮಾನತೆ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ‍್ಯ ಮತ್ತು ವೈಯಕ್ತಿಕ ಅಭ್ಯಾಸಗಳು) ಮತ್ತು ಪ್ರಾಯೋಗಿಕ ಆಧಾರದ ಮೇಲೆ (ಯಾವುದೇ ದೇಶವು ತನ್ನ ಏಳನೇ ಒಂದು ಭಾಗದಷ್ಟು ನಾಗರಿಕರನ್ನು ಕೆಳಮಟ್ಟಕ್ಕಿಳಿಸುವ ಮೂಲಕ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ) ಕೆಲಸ ಮಾಡಬೇಕು.ಬಹುಸಂಖ್ಯಾತರ ‘ಭಾರತ ಒಂದು ಹಿಂದೂ ರಾಷ್ಟ’ ಎಂಬ ಭಾವನೆಗೆ ಪ್ರತಿಯಾಗಿ ಹಿಂದೂ ಧರ್ಮದ ಬಹುತ್ವವನ್ನು ಒತ್ತಿಹೇಳುವ ಮೂಲಕ, ಜಾತ್ಯತೀತತೆಯ ದೃಢವಾದ ‘ಬದುಕು ಮತ್ತು ಬದುಕಲು ಬಿಡು’ ಎಂಬ ಸಂಸ್ಕೃತಿಯನ್ನು, ಸಮನ್ವಯತೆಯ ಸಂಪ್ರದಾಯವನ್ನು ಹಾಗೂ ಗೌರವಿಸುವಿಕೆಯ ಮತ್ತು ಆಶ್ರಯ ನೀಡುವ ಸುದೀರ್ಘ ಇತಿಹಾಸವನ್ನು ಮುಂದಿರಿಸುವ ಮೂಲಕ ಪ್ರಬಲ ಪ್ರತಿರೂಪವನ್ನು ಎದುರುಗೊಳಿಸಬೇಕಿದೆ. 
ಆದರೆ ಬಹಳ ಮುಖ್ಯವಾಗಿ, ಕಠಿಣ ಜಾತ್ಯತೀತವಾದಿಗಳು ಸ್ವಲ್ಪ ನಮ್ರತೆ ತೋರಿಸಬೇಕಾಗಿದೆ. ‘ಹುಸಿ ಜಾತ್ಯತೀತತೆ’ಯ ಕುರಿತ ಕೆಲವು ಬಲಪಂಥೀಯ ಆರೋಪಗಳು ಕೋಮುವಾದಿ ಮನಸ್ಥಿತಿಯದ್ದಾಗಿದ್ದರೂ ಉತ್ತಮವಾಗಿ ಸಿದ್ಧಗೊಂಡಿವೆ ಎಂದು ಒಪ್ಪಿಕೊಳ್ಳುವುದು ಆದರ್ಶಗಳಿಗೆ ದ್ರೋಹವಲ್ಲ. ಉದಾಹರಣೆಗೆ, ಕಾಂಗ್ರೆಸ್ ಮತ್ತು ಇತರ ಎಡ-ಒಲವು ಹೊಂದಿರುವ ಪಕ್ಷಗಳು ಮುಸ್ಲಿಮರನ್ನು ‘ಮತ ಬ್ಯಾಂಕ್’ ಆಗಿ ಬಳಸಿಕೊಳ್ಳುತ್ತಿರುವುದನ್ನು ಯಾವುದೇ ವಸ್ತುನಿಷ್ಠ ವೀಕ್ಷಕರು ಗಂಭೀರವಾಗಿ ಅಲ್ಲಗಳೆಯುವಂತಿಲ್ಲ. ಅಂತೆಯೇ, ರಾಜಕೀಯ ಪ್ರಾಯೋಜಿತ ಅಕ್ರಮ ವಲಸೆಯು ಮುಸ್ಲಿಮರ ಪರವಾಗಿ ಕೆಲವು ಗಡಿ ಪ್ರದೇಶಗಳ ಜನಸಂಖ್ಯಾ ವ್ಯವಸ್ಥೆಯನ್ನು ಬದಲಾಯಿಸುತ್ತದೆ ಎಂಬುದಕ್ಕೆ ಹೆಚ್ಚಿನ ಪುರಾವೆಗಳು ಸೂಚಿಸುತ್ತವೆ. ಅಲ್ಲದೆ, ಪ್ರಗತಿಪರ ಏಕರೂಪದ ನಾಗರಿಕ ಸಂಹಿತೆಯ ಪ್ರಚಾರಕ್ಕಿಂತ ಮುಸ್ಲಿಂ ವೈಯಕ್ತಿಕ ಕಾನೂನುಗಳನ್ನು ಆ ಸಮುದಾಯದ ಹಕ್ಕು ಎಂದು ಸಮರ್ಥಿಸಿಕೊಳ್ಳುವುದು ಎಲ್ಲ ನಾಗರಿಕರ ವೈಯಕ್ತಿಕ ಹಕ್ಕುಗಳು ಮತ್ತು ಸಮಾನತೆಗೆ ನಿಷ್ಠೆಯ ಹಿನ್ನೆಲೆಯಲ್ಲಿ ಎದುರಾಗುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಜಾತ್ಯತೀತತೆಯು ಪ್ರಕ್ರಿಯೆಯಲ್ಲಿ ಎಲ್ಲಿ ಹೊಂದಾಣಿಕೆ ಮಾಡಲಾಗಿದೆ ಎಂಬುದನ್ನು ಒಪ್ಪಿಕೊಳ್ಳುವುದು ಮುಸ್ಲಿಂ ವಿರೋಧಿ ಅಲ್ಲ. ಬದಲಾಗಿ, ನ್ಯಾಯಯುತ ಮನಸ್ಸಿನ ಟೀಕೆಗಳಿಗೆ ಮುಕ್ತತೆ, ಜಾತ್ಯತೀತವಾದಿಗಳು ತಮ್ಮ ಸಕಾರಾತ್ಮಕ ವಿಚಾರವನ್ನು ಹೆಚ್ಚು ವಿಶ್ವಾಸಾರ್ಹವಾಗಿ ಮಾಡಲು ಅನುವು ಮಾಡಿಕೊಡುತ್ತದೆ.
ಭಾರತದ ಭವಿಷ್ಯದ ಮೇಲೆ ಕೆಂಪು ದೀಪಗಳು ಮಿನುಗುತ್ತಿವೆ. ಸಿಎಎ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಹೊರತಾಗಿಯೂ, ‘ಮಧ್ಯಮ ಧೋರಣೆ’ ಹೊಂದಿರುವವರು ಜಾತ್ಯತೀತತೆಯ ಮೇಲಿನ ನಂಬಿಕೆಯನ್ನು ಕಳೆದುಕೊಂಡರೆ, ಬಿಜೆಪಿಯು ಹಿಂದುತ್ವವನ್ನು ಸೆಳೆಯಲು ಮತ್ತಷ್ಟು ಪ್ರಯತ್ನ ಹೆಚ್ಚಿಸುತ್ತದೆ. ಬಿಜೆಪಿ ಅಲ್ಲದ ಸರ್ಕಾರಗಳು ಅಂತಿಮವಾಗಿ ಅಧಿಕಾರವನ್ನು ಮರಳಿ ಪಡೆದರೂ, ಅವರು ಮುಸ್ಲಿಂ ವಿರೋಧಿ ಶಾಸನಗಳು, ವ್ಯವಸ್ಥಿತ ಪಕ್ಷಪಾತಗಳು ಮತ್ತು ಶಿಕ್ಷಣ ವ್ಯವಸ್ಥೆ, ಪೊಲೀಸ್ ಮತ್ತು ನಾಗರಿಕ ಸೇವೆಯಲ್ಲಿ ಹರಿದಾಡುತ್ತಿರುವ ಮತ್ತು ಶೀಘ್ರದಲ್ಲೇ ಸಮಾಜದೆಲ್ಲೆಡೆ ವ್ಯಾಪಕವಾಗಿ ಹರಡುವ ಧರ್ಮಾಂಧ ವರ್ತನೆಗಳನ್ನು ಇಲ್ಲವಾಗಿಸಲು ಹೆಣಗಾಡುತ್ತಾರೆ.
ಈ ಆತಂಕದ ಹೊತ್ತಿನಲ್ಲಿ, ದೇಶದ ಜಾತ್ಯತೀತವಾದಿಗಳು ಧ್ರುವೀಕರಣವನ್ನು ಸೃಷ್ಟಿಸುವ ಬದಲು ಮುಕ್ತ ಮತ್ತು ಸ್ವಯಂ ವಿಮರ್ಶಾತ್ಮಕ ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಅಗತ್ಯವಿದೆ- ತುರ್ತು ಪರಿಸ್ಥಿತಿಯ ನಂತರದ ಪ್ರಜಾಪ್ರಭುತ್ವದಂತೆ ಜಾತ್ಯತೀತತೆಯನ್ನು “ರಾಜಕೀಯಕ್ಕಿಂತ ಆಚೆಗೆ” ಮತ್ತು ನಮ್ಮ ಗಣರಾಜ್ಯಕ್ಕೆ ಎರಡನೆಯ ಸ್ವರೂಪದ ಸವಾಲಿಗೂ ನಿಲುಕದ ಸಂವಿಧಾನಾತ್ಮಕ ಸಿದ್ಧಾಂತವಾಗಿ ಮರುಸ್ಥಾಪಿಸುವ ಏಕೈಕ ಮಾರ್ಗವಿದು.

ಅನುವಾದ : ಮೊಹಮದ್ ಶರೀಫ್ ಕಾಡುಮಠ ಕೃಪೆ: ದಿ ಇಂಡಿಯನ್ ಎಕ್ಸ್‌ಪ್ರೆಸ್‌

LEAVE A REPLY

Please enter your comment!
Please enter your name here