ಚರಣ್ ಐವರ್ನಾಡು
(ಸಂಶೋಧನಾ ವಿದ್ಯಾರ್ಥಿ, ಮಂಗಳೂರು)

Let’s talk about our universities

JNU ವನ್ನು ಯಾಕೆ ಉಳಿಸಿಕೊಳ್ಳಬೇಕು ಎಂದರೆ ಭಾರತದ ಇತರ ವಿವಿಗಳಲ್ಲಿ ಉತ್ಪತ್ತಿಯಾಗುವ ನರಸತ್ತ, ವಿಚಾರ ಹೀನ ವಿದ್ಯಾರ್ಥಿಗಳ ನಡುವೆ JNU ನ ವಿದ್ಯಾರ್ಥಿಗಳು ಭಿನ್ನ ವಿಚಾರಗಳ ನಡುವೆ ಸಂವಾದ ಕಲ್ಪಿಸಿ argumentative ಭಾರತವನ್ನು ಕಟ್ಟುತ್ತಿದ್ದಾರೆ. ತಲೆಯಲ್ಲಿ ಮೂರು ಕಾಸಿನ ವಿಚಾರವಿಲ್ಲದೆ ಅಂಕಕ್ಕಾಗಿ ಓದುವ ಬೇರೆ ವಿವಿಗಳ ವಿದ್ಯಾರ್ಥಿಗಳಂತೆ ಬಾಯಿಗೆ ಬೀಗ ಜಡಿದು ಕೂರದೆ ಆಳುವ ಸರಕಾರವನ್ನು ಪ್ರಶ್ನಿಸುತ್ತಾ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಿದ್ದಾರೆ.

ಎರಡು ವರ್ಷ ನಾನು ಯೂನಿವರ್ಸಿಟಿಯಲ್ಲಿ ಓದುವಾಗ ಕರ್ನಾಟಕದ ಅನೇಕ ವಿವಿಗಳನ್ನು ನೋಡಿದ್ದೇನೆ. ಅಲ್ಲೆಲ್ಲ ತಮ್ಮ ಬರಹ, ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಪರಿಚಯವಾದ ಕೆಲವೇ ಕೆಲವು ಗೆಳೆಯರಿದ್ದಾರೆ. ಪರಸ್ಪರ ನಮ್ಮ ವಿವಿಗಳ ಬಗ್ಗೆ ಮಾತನಾಡಿದ್ದೇವೆ. ಡೆಲ್ಲಿ, JNU, ಹೈದರಾಬಾದ್ ಮೊದಲಾದ ವಿವಿಗಳ ಗೆಳೆಯರು ಅಲ್ಲಿನ ಬಗ್ಗೆ ಮಾತನಾಡುವಾಗ ಅಲ್ಲೆಲ್ಲ ಓದಬೇಕು ಅನ್ನಿಸಿದ್ದುಂಟು.

ಬರೀ ಕರ್ನಾಟಕದ ವಿವಿಗಳನ್ನೇ ತೆಗೆದುಕೊಂಡರೆ ಅವು ಸ್ಮಶಾನ ಸದೃಶವಾಗಿವೆ. ನಾನಿದ್ದ ವಿವಿಯ ವಿದ್ಯಾರ್ಥಿಗಳ ಬಗ್ಗೆಯಷ್ಟೇ ಉದಾಹರಿಸಿ ಹೇಳಬಲ್ಲೆ. ಎರಡು ವರ್ಷಗಳಲ್ಲಿ ಈ ದೇಶದ ಯಾವುದೇ ವಿದ್ಯಮಾನದ ಬಗ್ಗೆ ಇಲ್ಲಿನ ವಿದ್ಯಾರ್ಥಿಗಳು ಚರ್ಚೆ ನಡೆಸಿಲ್ಲ. ಅವರಿಗೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಏನಾಗುತ್ತಿದೆ ಎಂಬ ಕನಿಷ್ಟ ಪ್ರಜ್ಞೆಯೂ ಇಲ್ಲ. ಹಾಳಾಗಿ ಹೋಗಲಿ, ಯೂನಿವರ್ಸಿಟಿಯಲ್ಲಿ ಏನಾಗುತ್ತಿದೆ ಎಂಬುದು ಗೊತ್ತಿಲ್ಲ !

JNU ನ ವಿದ್ಯಾರ್ಥಿಗಳ ಬಗ್ಗೆ ಕೆಟ್ಟ ಕೆಟ್ಟದಾಗಿ ಸುಳ್ಳು ಪೋಸ್ಟ್ ಗಳನ್ನ ಹರಡುವ, ಅಲ್ಲಿಯ ವಿದ್ಯಾರ್ಥಿಗಳು ತೆರಿಗೆಯ ದುಡ್ಡನ್ನು ಪೋಲು ಮಾಡುತ್ತಿದ್ದಾರೆ ಎಂದು ಬರೆಯುವ ಮಂದಿ ಒಂದು ವಿಚಾರವನ್ನು ತಿಳಿಯಬೇಕು.

ಮಂಗಳೂರು ವಿವಿಯಲ್ಲಿ ನಡೆಯುವ ಯಾವುದೇ ಚರ್ಚೆ, ವಿಶೇಷ ಉಪನ್ಯಾಸ, ಸೆಮಿನಾರ್ ಗಳಿಗೆ ಅದನ್ನು ನಡೆಸುವ ವಿಭಾಗದ ವಿದ್ಯಾರ್ಥಿಗಳನ್ನು ಬಿಟ್ಟರೆ ಬೇರೆ ವಿಭಾಗದ Musthafa Sandeep Vishwas ನಂತಹ ತಲೆ ಕೆಟ್ಟವರು ಕೂರುತ್ತಿದ್ದರು. ಅಬ್ಬಬ್ಬ ಎಂದರೆ 50 ರಿಂದ 70, ಅವರಲ್ಲಿ ಅನೇಕರು PhD ಮಾಡುವ ಸಂಶೋಧನಾ ವಿದ್ಯಾರ್ಥಿಗಳು. ವಿವಿಯಲ್ಲಿ ರಾತ್ರೆ ಒಂದು ಡಿಜೆ ಪಾರ್ಟಿ ಇದೆ ಅಂದರೆ ಸೇರುವ ವಿದ್ಯಾರ್ಥಿಗಳನ್ನು ನೋಡಿದರೆ ತೆರಿಗೆ ಹಣದ ಬಗ್ಗೆ ಮಾತನಾಡುವ ಭಕ್ತ ಗಣಕ್ಕೆ ಪರಮಾನಂದ ಆಗಬಹುದು.

ಇಲ್ಲಿ ಬೌದ್ಧಿಕ ಚರ್ಚೆಗಳು ಮುಖ್ಯವಲ್ಲ. ಬಣ್ಣ ಬಣ್ಣದ ಬಟ್ಟೆ ತೊಟ್ಟು traditional day ಮಣ್ಣು ಮಸಿ ಅಂತ ದಿನ ಕಳೆಯುವುದೇ ಮುಖ್ಯವಾಗಿದೆ. ಹಾಗೆಂದು ಮೋಜು ಮಾಸ್ತಿ ಬೇಡವೆಂದಲ್ಲ. ಆದರೆ ಅಕಾಡೆಮಿಕ್ ಮತ್ತು ವೈಚಾರಿಕ ಚರ್ಚೆಗಳನ್ನು ನಿರ್ಲಕ್ಷಿಸಿ ಡಾನ್ಸ್, ಮಸ್ತಿ ಮಾಡುವ ವಿವಿಗಳ ವಿದ್ಯಾರ್ಥಿಗಳು ಎಂತ “ಸಾವಿಗ” ಮಾಸ್ಟರ್ಸ್ ಮಾಡುವುದು?

ವಿವಿಯಲ್ಲಿ ಬೆರಳೆಣಿಕೆಯ ಪ್ರೊಫೆಸರ್ ಗಳು ರಾಷ್ಟ್ರೀಯ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದರು. ನಂಗೆ ನೆನಪಿನಲ್ಲಿ ಇರುವವರು ಬರೀ ಆರೇಳು. ಅವರೆಲ್ಲ ತಮ್ಮ ಕ್ಷೇತ್ರದಲ್ಲಿ ದೊಡ್ಡ ವಿದ್ವಾಂಸರು. ಆದರೆ ಅವರದಲ್ಲದ ವಿಭಾಗದ ವಿದ್ಯಾರ್ಥಿಗಳು ಎಷ್ಟು ಜನ ಅವರಲ್ಲಿ ಮಾತನಾಡಲು ಹೋಗುತ್ತಾರೆ ಎಂಬುದು ನೋವನ್ನು ಉಂಟು ಮಾಡುವ ಸಂಗತಿ.

ಒಬ್ಬ ಪತ್ರಿಕೋದ್ಯಮದ ವಿದ್ಯಾರ್ಥಿ ಪತ್ರಿಕೆಯನ್ನೇ ಓದುವುದಿಲ್ಲ, I don’t like politics ಅನ್ನುತ್ತಾನೆ ! ಯಾರದೋ ಪ್ರಭಾವದಿಂದ ಒಳ ನುಸುಳುವ ಉಪನ್ಯಾಸಕರ ಚಿಂತಾಜನಕ ಸ್ಥಿತಿಯನ್ನು ನೋಡುವಾಗ ಕಣ್ಣಲಿ ನೀರು ಬರುತ್ತದೆ. “ಅಲ್ಲ ಮಾರಾಯ್ರೆ…ಅದು ಹೇಗೆ ನೀವು ಮಾತನಾಡುವಾಗ ಇಷ್ಟು ವಿಷಯ ಹೇಳೋದು? ಹೇಗೆ ಓದೋದು?” ಅಂತ ಅವರು ಕೇಳುವಾಗ ಅಯ್ಯೋ ಅನ್ನಿಸುತ್ತದೆ. ಅವರ ಟೇಬಲ್ ನಲ್ಲಿ ಚೇತನ್ ಭಗತನ ಪುಸ್ತಕಗಳು ಇರುತ್ತವೆ! ಇವರು ಏನು ಪಾಠ ಮಾಡಿಯಾರು? ಇವ್ರು ನಾಳೆ ನಮ್ಮ media ನಾಯಿಗಳು ಕೂಗಿದ ಹಾಗೆ ಕೂಗಲು ಬರುವವರು.

JNU ನಲ್ಲಿ ಲೈಬ್ರರಿ ಇಪ್ಪತ್ತನಾಲ್ಕು ಗಂಟೆ ತೆರೆದಿರುತ್ತದೆ. ಅಲ್ಲಿನ ತರಗತಿಗಳು ಎಂದರೆ ಬೆಳಗ್ಗೆಯಿಂದ ಸಂಜೆ ಮುಗಿಯುವಂತವಲ್ಲ. ಅಲ್ಲಿ ತರಗತಿ ನಿರಂತರ. ಡಾಬಾದಲ್ಲಿ ಮರದಡಿಯಲ್ಲಿ…ತರಗತಿಗಳು ನಡೆಯುತ್ತವೆ. ಅಲ್ಲಿ ಸಾರ್ವಜನಿಕವಾಗಿ ನಡೆಯುವ ಅತಿಥಿ ಉಪನ್ಯಾಸಗಳನ್ನು ನೋಡುವಾಗ ಅಲ್ಲಿನ ಶಕ್ತಿ ತಿಳಿಯುತ್ತದೆ.

ಎರಡು ವರ್ಷ ಏನು ಕಲಿತಿದ್ದೇನೆ ಎಂದು ನೆನಪಿಸಿಕೊಳ್ಳುವಾಗ ಕಣ್ಣು ಕತ್ತಲೆಯಾಗುವ ನನಗೆ JNU ಪರವಾಗಿ ನಿಲ್ಲುವ ತುರ್ತಿನ ಅರಿವಾಗಿದೆ.

ಯಾಕಾಗಿ JNU ಪರ ನಿಲ್ಲಬೇಕಿದೆ?

ಭಾರತ ಸರಕಾರ ಯುಜಿಸಿ (university grant comission) ಯನ್ನು ತೆಗೆದು ಅದರ ಬದಲಿಗೆ HECI (higher education commission of India) ವನ್ನು ತರುತ್ತಿದೆ. ಇದರ ಅಡಿಗೆ ಯುಸಿಜಿ ಮಾತ್ರ ಅಲ್ಲ AICTE ( All India Council for Technical Education) ವನ್ನು ಕೂಡ ತರಲಾಗುತ್ತದೆ. Just repealing the UGC Act, 1951 and AICTE Act, 1987 by HECI. ಇಲ್ಲಿ ಯುನಿವರ್ಸಿಟಿಗಳಿಗೆ ಫಂಡ್ ಬಿಡುಗಡೆ ಮಾಡುವ ಅಧಿಕಾರ HECI ಗೆ ಇರುವುದಿಲ್ಲ. ನೇರವಾಗಿ HRD ministry ಮಾಡುತ್ತದೆ. ಇದರಿಂದ HECI ಎಂಬುದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿ ಸರಕಾರ ಇಡೀ ವಿವಿಗಳನ್ನ ತನಗೆ ಬೇಕಾದ ಹಾಗೆ ನಡೆಸಿಕೊಳ್ಳುವ ಸಾಧ್ಯತೆಗಳಿವೆ.

ಭಾರತ ಸರಕಾರ ಸೃಷ್ಟಿಸಿರುವ HEFA (higher education finance agency) ಒಂದು Non Banking financy. ಇದರ ಮೂಲಕ ಯುನಿವರ್ಸಿಟಿಗಳಿಗೆ ಸಾಲವನ್ನು ಕೊಡುತ್ತದೆ. ಹತ್ತು ವರ್ಷಗಳಲ್ಲಿ ಅವು ಅದರ principal amount ಅನ್ನು ಮರುಪಾವತಿ ಮಾಡಬೇಕು. ಅದಕ್ಕೆ ಸರಕಾರ ಬಡ್ಡಿಯನ್ನು ಹಾಕುತ್ತದೆ. RBI ಇದಕ್ಕೆ RBI act ಅಡಿಯಲ್ಲಿ ಪರವಾನಗಿ ನೀಡಿದೆ. ಈ ಸಾಲದ ಮರುಪಾವತಿಯನ್ನು ಮಾಡಲು ಯುನಿವರ್ಸಿಟಿ ಬೇರೆ ಬೇರೆ ದಾರಿಗಳನ್ನು ಹುಡುಕಿಕೊಳ್ಳುತ್ತದೆ. ಅದು ವಿದ್ಯಾರ್ಥಿಗಳ ಮೇಲೆ ಫೀಸ್ ಅನ್ನು ಹೆಚ್ಚು ಮಾಡಬಹುದು, ಕಟ್ಟಡಗಳನ್ನು ಆಡಿಟೋರಿಯಂಗಳನ್ನು ಬಾಡಿಗೆ ಕೊಡಬಹುದು. ಸಣ್ಣ ಸಣ್ಣ ಹೋಟೆಲ್ ಗಳನ್ನ ತೆಗೆದು KFC, MacDonald ಗಳನ್ನು ತೆರೆಯಬಹುದು. ಒಟ್ಟಾರೆ ಎಲ್ಲೆಲ್ಲಿ ದುಡ್ಡು ಮಾಡುವ ಎಲ್ಲಾ ತಂತ್ರಗಳನ್ನು ಬಳಸಿಕೊಳ್ಳಬಹುದು.

ಹೀಗೆ ಸರಕಾರ ವ್ಯವಸ್ಥಿತವಾಗಿ ಸಾರ್ವಜನಿಕ ಶಿಕ್ಷಣವನ್ನು ಒಂದು ಲಾಭದಾಯಕ ಉದ್ದಿಮೆಯಾಗಿ ಮಾಡಿ ದುಬಾರಿ ಮಾಡುವ ಎಲ್ಲಾ ಯೋಜನೆಗಳನ್ನು ಹಾಕಿಕೊಂಡಿದೆ.

ದೇಶದೆಲ್ಲೆಡೆ NET ಯನ್ನ ಕಡ್ಡಾಯ ಮಾಡುವ ಮೂಲಕ ದೇಶದ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡುವ ಮೂರ್ಖ idea ಸರಕಾರದ್ದು. ನಾಲ್ಕು ಉತ್ತರಗಳಲ್ಲಿ ಒಂದನ್ನು ಆರಿಸಿ ಬರೆಯುವ ಈ ಪರೀಕ್ಷೆಯಲ್ಲಿ ಅಭ್ಯರ್ಥಿಯ ಬೌದ್ಧಿಕ ಮಟ್ಟವನ್ನು ಅಳೆಯಲಾಗುತ್ತದೆ. ಈ ಪರೀಕ್ಷೆ ಬರೆಯಲು ವಿಷಯದ ಬಗ್ಗೆ ಆಳವಾದ ಓದು ಮತ್ತು ಸ್ವತಂತ್ರ ಅಭಿಪ್ರಾಯವನ್ನು ಹೊಂದಬೇಕೆಂದು ಇಲ್ಲ. ಸಂಶೋಧನಾತ್ಮಕ ಮನೋಧರ್ಮವನ್ನು ಹೊಂದಿರುವ ಅನೇಕರಿಗೆ ಉರು ಹೊಡೆದು ಬರೆಯುವ ಈ ಪರೀಕ್ಷೆ ವಿಚಿತ್ರವಾಗಿ ಕಾಣುತ್ತದೆ. ಇದರಲ್ಲಿ ತೇರ್ಗಡೆಯಾದ ಮಂದಿ ನಾಳೆ ನಮ್ಮ university ಗಳಲ್ಲಿ ಪಾಠ ಮಾಡುತ್ತಾರೆ. ಈ ಮೂಲಕ ದೇಶ ಇಂದಿನ ವರೆಗೆ ಸೃಷ್ಟಿಸಿರುವ ಪಂಡಿತ ಪರಂಪರೆಯ ನಂತರ ಇವರನ್ನೆಲ್ಲ ವಿವಿಗಳ ಒಳಗೆ ತುಂಬಲಾಗುತ್ತದೆ. ಹಾಗಾಗಿ ಪತ್ರಿಕೆ ಓದದ ಮಂದಿ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ.

ನಂಗೆ ನನ್ನ ಸಮಕಾಲೀನ ಸ್ನೇಹಿತರ ಜೊತೆ ಆರೋಗ್ಯಪೂರ್ಣ ಸಂವಾದ ನಡೆಸಲು ಸಾಧ್ಯವಾಗುತ್ತಿಲ್ಲ. ತರಗತಿಗಳಲ್ಲಿ ಜೊತೆಗಾರರ ಜೊತೆ ಒಂದು ದೊಡ್ಡ ಕಂದಕ ನಿರ್ಮಾಣವಾಗಿರುವ ಹಾಗೆ ತೋರುತ್ತದೆ. ಮುಂದೆ ಈ ದೇಶ ಸ್ವತಂತ್ರ ಆಲೋಚನೆಯಿಲ್ಲದೆ, ಸೃಜನಶೀಲವಾಗಿ ಯೋಚಿಸಲು ಬಾರದ ಸಮೂಹವನ್ನು ಸೃಷ್ಟಿಸುತ್ತದೆ. ವಿವಿಗಳಲ್ಲಿ ಮಾನವಿಕಗಳನ್ನು ನಾಶ ಮಾಡಿ ಕಂಪನಿಗಳಿಗೆ ಕೂಲಿ ಆಳುಗಳನ್ನು ಸೃಷ್ಟಿಸುವ ಕೋರ್ಸುಗಳು ಆರಂಭ ಆಗಿವೆ.

ಮಾನವಿಕ ಶಿಸ್ತುಗಳಿಗೆ ಬೆಲೆ ಕೊಡದ ದೇಶ ಬರಿಯ ಯಂತ್ರ ಮಾನವರನ್ನು ಸೃಷ್ಟಿಸಬಲ್ಲದು. ಉದ್ಯೋಗದ ಕಾರಣದಿಂದ ಅನ್ವಯಿಕ ವಿಜ್ಞಾನ, business studies ಕಡೆಗೆ ಹೋಗುವ ವಿದ್ಯಾರ್ಥಿಗಳಿಗೂ ಕೆಲಸ ಇಲ್ಲ.

ಉದ್ಯೋಗ ನಮ್ಮ ಮೂಲಭೂತ ಹಕ್ಕು ಆಗಬೇಕಿದೆ. ಆದರೆ ಇಡೀ ದೇಶ ನಿರುದ್ಯೋಗದ ಸಮಸ್ಯೆಯಲ್ಲಿ ಇರುವಾಗ ಇದರ ಬಗ್ಗೆ ಗಟ್ಟಿಯಾಗಿ ಮಾತನಾಡದ ತಣ್ಣಗಿನ ರಕ್ತದ ಯುವಕರು ವಿವಿಗಳಲ್ಲಿ ಇದ್ದಾರೆ. ಅವರಿಗೆ ಟ್ರೊಲ್ ಮಾಡುವುದು, ಜೈ ಮೋದಿ ಅನ್ನುವ, ಟಿಕ್ ಟಾಕ್ ಮಾಡುವ ಕೆಲಸ ಇರುವುದರಿಂದ ಈ ಉದ್ಯೋಗ ಎಲ್ಲ ಯಾರಿಗೆ ಬೇಕು?

ಪೆಬ್ರವರಿ 2019 CAG ವರದಿಯ ಪ್ರಕಾರ 94,036 ಕೋಟಿ ಸೆಕೆಂಡರಿ ಮತ್ತು ಉನ್ನತ ಶಿಕ್ಷಣದ ಸೆಸ್ ಹಾಗೂ 7298 ಕೋಟಿ ಸಂಶೋಧನೆ ಮತ್ತು ಅಭಿವೃದ್ಧಿಯ ಸೆಸ್ ಖರ್ಚಾಗದೆ ಹಾಗೆ ಉಳಿದಿದೆ. ಈ ಸರಕಾರ ಏನು ಮಾಡುತ್ತಿದ್ದೆ? ಇದನ್ನು ಕೇಳುವ JNU ಪರ ನಿಲ್ಲದೆ ಇದ್ದರೆ ನಾವು ನಮ್ಮ ಮುಂಬರುವ ಪೀಳಿಗೆಗೆ ಮಾಡಿದ ದೊಡ್ಡ ದ್ರೋಹ, ಇದು ರಾಷ್ಟ್ರ ದ್ರೋಹ.

ಒಂದು ಪರೀಕ್ಷೆ ನೀವೇ ಮಾಡಿ… ಒಬ್ಬ ಮಾಸ್ಟರ್ಸ್ ಮಾಡುವ ವಿದ್ಯಾರ್ಥಿಯ ಹತ್ತಿರ ಹೋಗಿ ಯುಜಿಸಿ ಬಗ್ಗೆ, ಅವನದೇ ಯೂನಿರ್ಸಿಟಿಯ ಬಗ್ಗೆ, ನಿರುದ್ಯೋಗದ ಸಮಸ್ಯೆಯ ಬಗ್ಗೆ ಕೇಳಿ. ಅವರಿಂದ ಉತ್ತರ ಸಿಕ್ಕರೆ ಬಚಾವ್. ನಾನು ಇದನ್ನು ಆರಂಭ ಮಾಡಿದ್ದೇನೆ. ಯಾರೂ ಸಿಕ್ಕಿಲ್ಲ!

LEAVE A REPLY

Please enter your comment!
Please enter your name here