ವಿಶೇಷ ಲೇಖನ

ಲೇಖಕರು: ಮಹಮ್ಮದ್ ಶರೀಫ್ ಕಾಡುಮಠ

2016ರ ನವೆಂಬರ್ 8, 9ರ ದಿನಗಳ ನೆನಪು ಬಹುಶಃ ಭಾರತೀಯರ ಮನಸ್ಸಿನಿಂದ ಮಾಯುವುದು ಕಷ್ಟ. ತತ್ತರಿಸಿ ಹೋದ ಗ್ರಾಮೀಣ ಬಡ ಜನರು ಎಟಿಎಂಗಳ ಮುಂದೆ ಸಾಲು ನಿಂತ ಚಿತ್ರ ಈಗಲೂ ಕಣ್ಣ ಮುಂದೆ ಬರುತ್ತದೆ. ಗಾಯದ ನೋವು ಇನ್ನೂ ಮಾಯವಾಗಿಲ್ಲ.

ಈ ಬಾರಿಯ ಆರ್ಥಿಕ ಕುಸಿತದ ಬಹುಮುಖ್ಯ ಕಾರಣಗಳನ್ನು ಗುರುತಿಸುವಾಗ ಹೆಚ್ಚಿನವರು ಕಣ್ಣು ಹಾಯಿಸಿದ್ದೇ ನೋಟು ರದ್ದತಿಯ ಕಡೆಗೆ. ವರ್ಷ ಮೂರಾಗುತ್ತಾ ಬಂದರೂ ನೋಟು ರದ್ದತಿಯ ಪರಿಣಾಮ ಮಾತ್ರ ಬದುಕಿನ ಭಾಗವೇ ಆಗಿಬಿಟ್ಟಿದೆಯೇ ಹೊರತು ಅದೊಂದು ಯಶಸ್ವಿ ಪ್ರಯೋಗವಾಗಿ ಏನೂ ಜನರ ಮುಂದೆ ಇಲ್ಲ. ಜನ ಅದನ್ನು ಅನಿವಾರ್ಯವಾಗಿ ಸ್ವೀಕರಿಸಬೇಕಾಗಿ ಬಂದಿದೆ. ಬೆರಳು ಕಳಕೊಂಡವ ಬೆರಳಿಲ್ಲದ ಕೊರಗು ಸಹಿಸಿಕೊಂಡು ಬದುಕಿದ ಹಾಗೆ.

ಜನಸಾಮಾನ್ಯರನ್ನು ನೋಟು ರದ್ದತಿ ಕಾಡಿದ ರೀತಿಯನ್ನು ಇಲ್ಲಿ ಉಲ್ಲೇಖಿಸಬೇಕಿದೆ. ನೋಟು ರದ್ದತಿಗೂ ಮುನ್ನ ಜನರು ಎಟಿಎಂ ಬಳಸುತ್ತಿದ್ದರು. ಅಗತ್ಯಕ್ಕೆ ಬೇಕಾದಷ್ಟು ಹಣವನ್ನು ಮಿತಿಯಲ್ಲಿ ಪಡೆಯುತ್ತಿದ್ದರು. ಅವರಿಗೆ ಬೇಕೆನಿಸಿದಷ್ಟು- ಕಡಿಮೆ ಅಥವಾ ಜಾಸ್ತಿ ಹಣವೂ ಸಿಗುತ್ತಿತ್ತು. ಆದರೆ ನೋಟು ರದ್ದತಿಯ ನಂತರ ಜನರ ವ್ಯವಹಾರ, ಉಳಿತಾಯ, ಖರ್ಚು ಅನಿವಾರ್ಯವಾಗಿ ಬದಲಾಗಿದೆ. ಕೇವಲ ನೂರು ರೂಪಾಯಿ ತುರ್ತಾಗಿ ಬೇಕು ಎಂದು ಎಟಿಎಂ ಕಡೆಗೆ ಹೋದರೆ, ಅಲ್ಲಿ ₹2000ದ ನೋಟು ಮಾತ್ರ ಲಭ್ಯ ಎಂಬ ಸೂಚನೆ. ತುರ್ತು ಎಂದ ಮೇಲೆ ಹಣ ತೆಗೆಯದಿರಲು ಗೊತ್ತಿಲ್ಲ. ಕೈಯಲ್ಲಿದ್ದರೆ ಖರ್ಚಾಗಿ ಮುಗಿಯುತ್ತದೆ ಎಂದೇ ಜನರು ಬ್ಯಾಂಕಿನಲ್ಲಿ ಹಣ ಕೂಡಿಡುತ್ತಾರೆ. ತಕ್ಷಣಕ್ಕೆ ಬೇಕಾದಾಗ, ಅದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಹಣವನ್ನು ತೆಗೆಯುವ ಪರಿಸ್ಥಿತಿ ಬಂದರೆ ಹಣವನ್ನು ಬ್ಯಾಂಕಿನಲ್ಲಿ ಇಡಬೇಕೆ ? ಕೈಯಲ್ಲಿ ಇದ್ದ ಮೇಲೆ ಖರ್ಚಾಗದೆ ಉಳಿಯುವುದು, ಅಥವಾ ಅದನ್ನು ಉಳಿಸಲು ಪ್ರಯತ್ನಿಸುವುದು ಅಷ್ಟು ಸುಲಭದ ಮಾತಲ್ಲ. ಕಾರಣ ತಡೆದಿಟ್ಟ ಕೆಲವು ಸಣ್ಣಪುಟ್ಟ ಅಗತ್ಯಗಳೂ ಅಂತಹ ಸಂದರ್ಭದಲ್ಲಿ ಜೀವ ಪಡೆಯುತ್ತವೆ.

ನೋಟು ರದ್ದತಿಯಾದ ಮರುದಿನ, ನಮ್ಮ ಊರಿನ ಎಟಿಎಂ ಮುಂದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಸುಸ್ತಾದ ಮಹಿಳೆಯೊಬ್ಬರು ಕೊನೆಗೆ ₹2000 ಪಡೆದುಕೊಂಡು ಹೋದರು. ಸ್ವಲ್ಪ ಹೊತ್ತಿನಲ್ಲೇ ಹೋಗುವ ದಾರಿಯಲ್ಲಿ ಆ ನೋಟು ಕಳೆದುಹೋಯಿತು‌. ಆ ಮಹಿಳೆ ಕಣ್ಣೀರಿಟ್ಟಿದ್ದರು. ಕಳೆದುಹೋದದ್ದು ನೂರೋ ಇನ್ನೂರೋ ರೂಪಾಯಿ ಅಲ್ಲ, ಬರೋಬ್ಬರಿ 2000 ರೂಪಾಯಿ‌. ಯೋಚಿಸಿ ನೋಡಿ, ಅದೇ 2000 ರೂಪಾಯಿ ಆ ಮಹಿಳೆಯ ಕೈಯಲ್ಲಿ ನೂರು ರೂ.ಗಳ 20 ನೋಟುಗಳಾಗಿ ಇದ್ದಿದ್ದರೆ, ಅಥವಾ 500ರ ನಾಲ್ಕು ನೋಟುಗಳಾಗಿ ಇದ್ದಿದ್ದರೆ ಅವು ಹೀಗೆ ಕಳೆದುಹೋಗುತ್ತಿತ್ತೆ ? 20 ನೋಟುಗಳು ಅಥವಾ ನಾಲ್ಕೂ ನೋಟುಗಳು ಒಮ್ಮೆಲೆ ಕಳೆದುಹೋಗುವ ಸಾಧ್ಯತೆ ಇರುತ್ತಿತ್ತೇ?

ಕೆಲವು ಬಾರಿ ಒಂದೇ ಊರಿನ ಹಲವು ಎಟಿಎಂಗಳಲ್ಲಿ ಹಣವೇ ಇರುತ್ತಿರಲಿಲ್ಲ (ಈ ಸಮಸ್ಯೆ ಈಗಲೂ ಇದೆ). ಒಬ್ಬ ಹತ್ತು ಸಾವಿರ ರೂ. ಪಡೆದರೆ ಉಳಿದವರು ಸರತಿಯಲ್ಲಿ ನಿಂತು ಕಾಯುವುದೇ ವ್ಯರ್ಥವಾಗುತ್ತಿತ್ತು. ಏಕೆಂದರೆ ಹಣದ ಪೂರೈಕೆ ಅಷ್ಟು ಕಡಿಮೆಯಾಗಿತ್ತು. ಹೊಸ ನೋಟುಗಳು ಆಗ ತಾನೆ ಸಿದ್ಧವಾಗುತ್ತಿದ್ದವಷ್ಟೆ.

ನೋಟು ರದ್ದತಿಯಿಂದ ಮಧ್ಯಮ ವರ್ಗಕ್ಕೆ, ಬಡ ವರ್ಗಕ್ಕೆ ಉಂಟಾದ ಪರಿಣಾಮ ಇನ್ನೂ ಕೂಡಾ ಚೇತರಿಕೆ ಕಂಡಿಲ್ಲ. ಜನರು ನಗು ನಗುತ್ತ ಮಾತನಾಡುತ್ತಾರೆ, ವ್ಯವಹರಿಸುತ್ತಾರೆ. ಆದರೆ ಅವರೊಳಗಿನ ಸಂಕಟ ಹಾಗೆಯೇ ಉಳಿದಿರುತ್ತದೆ. ನಿತ್ಯವೂ ಈ ಹಣವೇ ಸಮಸ್ಯೆ ಅವರಿಗೆ. ಸಮಸ್ಯೆ ನೋಟು ರದ್ದಾಗುವ ಮೊದಲೂ ಇತ್ತು. ಆದರೆ ಅದು ಅವರ ನೆಮ್ಮದಿ ಕಸಿದುಕೊಳ್ಳುತ್ತಿರಲಿಲ್ಲ. ಒಂದು ಕೆಲಸ ಹುಡುಕಿಕೊಂಡು ಊರೂರು ಅಲೆಯುವ ಪರಿಸ್ಥಿತಿ ಇನ್ನೂ ಕಡಿಮೆಯಾಗಿಲ್ಲ. ಕೆಲಸ ಮಾಡಿಸಿದರೆ ಸಂಬಳ ಕೊಡಲು ತನ್ನ ಬಳಿ ಹಣ ಇಲ್ಲದೆ ಮಧ್ಯಮ ವರ್ಗದ ಜನರು ಮೌನವಾಗುವ ಸ್ಥಿತಿ ಈಗಲೂ ಇದೆ. ಕೂಲಿ ಕೆಲಸ ಮಾಡುವವರ ಸಂಬಳ ವರ್ಷದಿಂದ ವರ್ಷಕ್ಕೆ ಸ್ವಲ್ಪವಾದರೂ ಹೆಚ್ಚಾಗುತ್ತದೆ. ಅದು ಸಮಾಜದ ಆರ್ಥಿಕ ಪರಿಸ್ಥಿತಿಗೆ ಹೊಂದಿಕೊಂಡು ಅದರಷ್ಟಕ್ಕೆ ಆಗುತ್ತಿರುತ್ತದೆ. ಆದರೆ ನೋಟು ರದ್ದತಿಯ ಬಳಿಕ ಇದು ಕಷ್ಟವಾಯಿತು. ವರ್ಷ ಕಳೆದರೂ ಸಂಬಳ ಮೊದಲಿನಷ್ಟೇ ಇದೆ. ಇದು ದುಡಿಯುವ ವರ್ಗವನ್ನು ಹತಾಶೆಗೆ ತಳ್ಳಿದೆ. ಹಲವು ಕ್ಷೇತ್ರಗಳಲ್ಲಿ ಇಂತಹ ಹಲವಾರು ಸಮಸ್ಯೆಗಳು ಜನರನ್ನು ಖಂಡಿತಾ ಕಾಡಿರುತ್ತವೆ. ಅವು ಜನರೊಳಗೆ, ಆ ವಲಯದೊಳಗೆ ಬೂದಿ ಮುಚ್ಚಿದ ಕೆಂಡವಾಗಿ ಉಳಿದಿರುತ್ತವೆ.

ಮನೆಯ ಮಾಡು ರಿಪೇರಿ ಮಾಡುವ ಮುನ್ನ, ತನಗೆ ಆಶ್ರಯಕ್ಕೆ ಪರ್ಯಾಯವಾದ ಒಂದು ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಕಲ್ಪಿಸಬೇಕು ಎಂಬ ಸಾಮಾನ್ಯ ಪ್ರಜ್ಞೆ, ತನ್ನದೇ ಕುಟುಂಬ ಹೊಂದಿರುವ ಎಂತಹ ಸಾಮಾನ್ಯ ವ್ಯಕ್ತಿಯಲ್ಲಿಯೂ ಇರುತ್ತದೆ. ನೋಟು ರದ್ದತಿ ಈ ಮೊದಲು ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದಿದೆ. ಆದರೆ ಅವು ಇಂತಹ ಸಂಕಟವನ್ನು ತಂದೊಡ್ಡಲಿಲ್ಲ, ನಡುರಾತ್ರಿಯಲ್ಲಿ ಜನಸಾಮಾನ್ಯನ ನಿದ್ದೆಗೆಡಿಸಲಿಲ್ಲ. ಪರ್ಯಾಯವೊಂದನ್ನು ಮೊದಲು ಹುಡುಕಿ, ಬಳಿಕವಷ್ಟೇ ನೋಟು ರದ್ದು ಮಾಡಲಾಗುತ್ತಿತ್ತು. ಅಥವಾ ನೋಟು ಚಾಲ್ತಿಯಲ್ಲಿರುವಂತೆಯೇ ಹೊಸ ನೋಟು ಚಾಲ್ತಿಗೆ ಬಂದು, ಮತ್ತೆ ನಿಧಾನಕ್ಕೆ ಹಳೆ ನೋಟು ರದ್ದಾಗುವಂತೆ ಮಾಡುವುದು ಜಾಣ್ಮೆ. ಯಾವ ಮುಂದಾಲೋಚನೆಯೂ ಇಲ್ಲದೆ ಜನರ ಮೇಲೆ ಇಂತಹ ಅನಗತ್ಯ ಅಸ್ತ್ರ ಪ್ರಹಾರ ಮಾಡಿದ್ದು ಈ ಸರ್ಕಾರದ ಅಧಿಕಪ್ರಸಂಗತನವನ್ನು ಬಿಂಬಿಸುತ್ತದೆ.

ಹೇಳಲೇಬೇಕಾದ ಒಂದು ಸಂಗತಿಯೆಂದರೆ, ನೋಟು ರದ್ದಾದ ಸಂದರ್ಭ ಮೋದಿ ಭಕ್ತರೆಲ್ಲ ಅದನ್ನು ಹೇಗೆಲ್ಲಾ ಮಾಡಿ ಸಮರ್ಥಿಸಲು ಪ್ರಯತ್ನಿಸಿದರು. ಎಷ್ಟೇ ಟೀಕಿಸಿದರೂ ಅವರು ಮಾತ್ರ ಸಮರ್ಥನೆಯಲ್ಲೇ ಕಾಲ ಕಳೆದರು. ಕೆಂಡದಂತಹ ಜ್ವರ ಬರುತ್ತಿದ್ದರೂ, ‘ಇಲ್ಲ ನನಗೆ ಜ್ವರವೇ ಬರಲಿಲ್ಲ’ ಎಂದು ಹೇಳುತ್ತಾ ಕೂತರೆ ಮುಂದೊಂದು ದಿನ ಅದು ಗಂಭೀರ ರೋಗವಾಗಿ ಉಲ್ಬಣಿಸದೆ ಇರುತ್ತದೆಯೇ. ನೋಟು ರದ್ದತಿ ವಿಚಾರದಲ್ಲೂ ಆಗಿದ್ದು ಇದೇ. ಅಂದು, ಭಾರತ ಭ್ರಷ್ಟಾಚಾರ ಮುಕ್ತವಾಗುತ್ತದೆ ಎಂದು ಕುಣಿದು, ಕುಪ್ಪಳಿಸಿ, ಮೋದಿಯನ್ನು ಹೊಗಳಿ ಅಟ್ಟಕ್ಕೇರಿಸಿದವರೆಲ್ಲ ಇಂದು ತಮ್ಮ ಮನೆಯ ಅಟ್ಟ ಹುಡುಕುತ್ತಿದ್ದಾರೆ.
ದೇಶದಲ್ಲಿ ಈಗ ಉಂಟಾಗಿರುವ ಆರ್ಥಿಕ ಕುಸಿತ ನೋಟು ರದ್ದತಿಯ ಪ್ರತಿಫಲನ. ಎಷ್ಟೇ ಮುಚ್ಚಿಟ್ಟರೂ ಇಂತಹ ಸಮಸ್ಯೆಗಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಏಕೆಂದರೆ ಆರ್ಥಿಕ ವ್ಯವಸ್ಥೆ ಎನ್ನುವುದು ದೇಶವೆಂಬ ದೇಹದ ಆರೋಗ್ಯ. ಅದು ಹದಗೆಟ್ಟರೆ ಅದರ ಪರಿಣಾಮ ಸಮಾಜದಲ್ಲಿ ಗೋಚರಿಸಿಯೇ ತೀರುತ್ತದೆ. ಬೂದಿ ಮುಚ್ಚಿದ ಕೆಂಡ ಹಳತಾಯಿತು. ಹಾಗಾಗಿ ಇದು ಮೋದಿ ಮುಚ್ಚಿದ ಹೊಂಡ.

LEAVE A REPLY

Please enter your comment!
Please enter your name here