ಭಾಗ-2

-ಡಾ. ಮುಜಾಫ್ಫರ್ ಅಸ್ಸಾದಿ
ವಿಶೇಷಾಧಿಕಾರಿ, ರಾಯಚೂರು ವಿಶ್ವವಿದ್ಯಾಲಯ

ಎರಡು ಬಹುಮುಖ್ಯವಾದ ಸಾರ್ವಜನಿಕ ನೀತಿ ಸಾಮಾಜಿಕವಾಗಿ ನೂರಾರು ಸಮುದಾಯಗಳನ್ನು ನಿರ್ಮಿಸಿತ್ತಲ್ಲದೆ ರಾಜಕಾರಣದ ಕಥನ ಮತ್ತು ಚೌಕಟ್ಟನ್ನೆ ಬದಲಾಯಿಸಿತು ಎಂದರೂ ತಪ್ಪಾಗಲಾರದು. ಅದರಲ್ಲಿ ಒಂದು ಸಾರ್ವಜನಿಕ ನೀತಿ ಮೀಸಲಾತಿಗೆ ಸಂಬಂಧಪಟ್ಟರೆ ಇನ್ನೊಂದು ಭೂ ಮಸೂದೆಗೆ ಸಂಬಂಧ ಪಟ್ಟದ್ದು. ಇದು ಯಾಕೆ ಮುಖ್ಯವಾಗುತ್ತದೆ ಎಂದರೆ ಈ ನೀತಿ ನೂರಾರು, ಸಾವಿರಾರು ಸಾಮಾಜಿಕ ವರ್ಗಗಳನ್ನು, ಸಣ್ಣ ಪುಟ್ಟ ಜಾತಿಗಳನ್ನು ರಾಜಕಾರಣದ ಹೊಸ್ತಿಲಲ್ಲಿ ನಿಲ್ಲಿಸಿತ್ತಲ್ಲದೆ, ರಾಜಕಾರಣದಲ್ಲಿ ಕಲ್ಪಿತ ಸಾಮಾಜಿಕ ಸಮೀಕರಣಕ್ಕೆ ದಾರಿ ಮಾಡಿಕೊಟ್ಟಿತ್ತು. ಅದು ಸಾಮಾಜಿಕ ಸಂಘರ್ಷಗಳಿಗೂ ಕಾರಣವಾಯಿತು. ಮಾತ್ರವಲ್ಲದೇ ಅಧಿಕಾರ ರಾಜಕಾರಣವನ್ನು ಬದಲಾಯಿಸಲು ಕೂಡ ಸಹಾಯ ಮಾಡಿತ್ತು.

ಅ) ಜಾತಿ, ಮೀಸಲಾತಿ ಮತ್ತು ಬದಲಾಗುತ್ತಿರುವ ಸಮಾಜ

ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಇತ್ಯಾದಿ ರಾಜ್ಯಗಳಲ್ಲಿರುವಂತೆ ಕರ್ನಾಟಕದಲ್ಲೂ ಪ್ರಬಲ ಜಾತಿಗಳಿರುವುದು ವಾಸ್ತವ. ಆಂಧ್ರ, ತೆಲಂಗಾಣದಲ್ಲಿ ರೆಡ್ಡಿ-ಕಮ್ಮಾಗಳು, ಮಹಾರಾಷ್ಟ್ರದಲ್ಲಿ ಮರಾಠಿಗರು, ಗುಜರಾತಿನಲ್ಲಿ ಪಟೇಲರು ಅಥವಾ ಪತಿದಾರರು, ಉತ್ತರ ಪ್ರದೇಶದಲ್ಲಿ ಜಾಟರು ಪ್ರಬಲ ಜಾತಿಗಳೆಂದಾದರೆ ಕರ್ನಾಟಕದಲ್ಲಿ ಎರಡು ಜಾತಿಗಳು ಪ್ರಬಲ ಜಾತಿಗಳೆಂದು ಐತಿಹಾಸಿಕವಾಗಿ ಗುರುತಿಸಲ್ಪಡುತಾರೆ. ಅವುಗಳೆಂದರೆ ಲಿಂಗಾಯುತರು ಮತ್ತು ಒಕ್ಕಲಿಗರು. ಆದರೆ, ಇವತ್ತು ಅದೇ ಜಾತಿಗಳ ಬದಲಿಗೆ ದಲಿತರು ಮತ್ತು ಅಲ್ಪಸಂಖ್ಯಾತರು ಪ್ರಬಲ ಜಾತಿಗಳಾಗಿ ಸಮುದಾಯಗಳಾಗಿ ಹೊರಹೊಮ್ಮಿದರೆ ಆಶ್ಚರ್ಯವಿಲ್ಲ. ಕೆಳಜಾತಿಗಳು ಇಂದಿನ ಸಂದರ್ಭದಲ್ಲಿ “ಸಂಸ್‍ಕೃತೀಕರಣ”ದಿಂದ ಆಧುನೀಕತೆಯ ಭಾಗವಾಗುತ್ತಿರುವುದು ಕೂಡ ಅಷ್ಟೆ ವಾಸ್ತವ.

ವಾಸ್ತವವಾಗಿ ಲಿಂಗಾಯತರು ಹಾಗು ಒಕ್ಕಲಿಗರ ಸಂಖ್ಯೆ ಬಹುದೊಡ್ಡದೇನಿಲ್ಲ. ಅವರು ಒಟ್ಟಾರೆ ಜನಸಂಖ್ಯೆ 26 ಶೇಕಡಾದಷ್ಟಿದ್ದಾರೆ. ಇತ್ತೀಚಿನ ವರೆಗೂ ರಾಜಕೀಯ ಹಾಗೂ ಅಧಿಕಾರದ ಕೇಂದ್ರಗಳು ಅವರ ಹಿಡಿತಲ್ಲಿದ್ದವು. ವಿಚಿತ್ರವೆಂದರೆ ಇವೆರಡು ಪ್ರಬಲ ಜಾತಿಗಳು ಮೈಸೂರು ರಾಜ್ಯದ ಪುನರ್ ವಿಂಗಡನೆಯ ಸಂದರ್ಭದಲ್ಲಿ ವಿರೋಧವಾದ ನಿಲುವುಗಳನ್ನು ತಳೆದಿದ್ದವು. ಹಳೇಯ ಮೈಸೂರು ಪ್ರಾಂತ್ಯದ ಒಕ್ಕಲಿಗರು ರಾಜ್ಯದ ಪುನರ್ ವಿಂಗಡನೆ ವಿರೋಧಿಗಳಾಗಿದ್ದರು ಎಂಬ ಅಪಾದನೆ ಇದೆ. ಇದಕ್ಕೆ ಕಾರಣಗಳಿದ್ದವು. ಪುನರ್ ವಿಂಗಡನೆ ಮೈಸೂರು ರಾಜ್ಯದಲ್ಲಿ ಜಾತಿಯ ಸಮೀಕರಣವನ್ನು ಬದಲಾಯಿಸಬಹುದೆಂಬ ಹೆದರಿಕೆ ಇಲ್ಲಿ ಕೆಲಸ ಮಾಡುತಿತ್ತು. ಅಂದರೆ, ಉತ್ತರ ಕರ್ನಾಟಕದ ಲಿಂಗಾಯತರು ಮೈಸೂರು ರಾಜ್ಯದಲ್ಲಿ ಪ್ರಬಲರಾಗುತ್ತಾರೆ. ಒಕ್ಕಲಿಗರ ಪ್ರಾಬಲ್ಯತೆ ಕಡಿಮೆಯಾಗುತ್ತದೆ ಎಂಬ ಗಂಭೀರವಾದ ನಂಬಿಕೆ ಇಲ್ಲಿ ಕೆಲಸ ಮಾಡುತ್ತಿತ್ತು. ಆದರೆ ವಾಸ್ತವ ಬೇರೆಯಾಯಿತು. ಪುನರ್ ವಿಂಗಡೆಣೆಯ ನಂತರ ಇವೆರಡೂ ಜಾತಿಗಳು ರಾಜಕೀಯವನ್ನು ಮಾತ್ರವಲ್ಲದೆ ಭೂಮಿಯ ಮೇಲೂ ತಮ್ಮ ಹಿಡಿತವನ್ನು ಸಾಧಿಸಲು ಯಶಸ್ವಿಯಾದರು. ಅದು ಸಾಧ್ಯವಾದದ್ದು ಹಂತ ಹಂತವಾಗಿ ಜಾರಿಗೆ ತಂದ ಭೂ ಮಸೂದೆಯನ್ನು ಸೋಲಿಸುವುದರ ಮುಖಾಂತರ. ಈ ರೀತಿಯ ರಾಜಕಾರಣ 1970ರ ದಶಕದ ತನಕ ನಡೆಯಿತು. ದೇವರಾಜ್ ಅರಸ್ ಮುಖ್ಯಮಂತ್ರಿಯಾದ ನಂತರ ಅವರ ಹಿಡಿತ ಕಡಿಮೆಯಾಯಿತು. ಆದರೆ, ಸಂಪೂರ್ಣವಾಗಿ ನಾಶವಾಗಲಿಲ್ಲ. ವಿಚಿತ್ರವೆಂದರೆ ಮೀಸಲಾತಿಯಿಂದ ಲಾಭ ಪಡೆದವರು ಕೂಡ ಇದೇ ಪ್ರಭಲ ಜಾತಿಗಳು. 1919ರ ದಶಕದಿಂದ ಜಾರಿಗೊಳಿಸಿದ ಮೀಸಲಾತಿ ಕೆಳಜಾತಿಗಿಂತ ಪ್ರಬಲ ಜಾತಿಗೆ ಲಾಭ ಮಾಡಿಕೊಟ್ಟದ್ದೇ ಹೆಚ್ಚು. ಇದಕ್ಕೆ ತೀರಾ ವಿರುದ್ಧವಾದದ್ದು ಹಿಂದುಳಿದ ಜಾತಿಗಳ ಸ್ಥಿತಿಗತಿ. ಕರ್ನಾಟಕದಲ್ಲಿ ಮೀಸಲಾತಿ ಇದ್ದರೂ, ಸ್ವಾತಂತ್ರ್ಯಪೂರ್ವದಲ್ಲಿ ಹಿಂದುಳಿದ ಜಾತಿಗೆ ಸೇರಿದ ಅರಸೊತ್ತಿಗೆ ಇದ್ದರೂ, ಅವರ ಸ್ಥಾನಮಾನದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿಲ್ಲವೆಂದೇ ಹೇಳಬೇಕು. ಬಹುಸಂಖ್ಯಾತ ಹಿಂದುಳಿದ ವರ್ಗಗಳು ಗ್ರಾಮೀಣ ವರ್ಗಗಳಾಗಿ, ಗೇಣಿದಾರರಾಗಿ, ಕೃಷಿ ಕಾರ್ಮಿಕರಾಗಿ, ಬಡ ರೈತರಾಗಿ ಸಾಂಪ್ರದಾಯಿಕ ಕಸುಬುಗಳಲ್ಲಿ ನಿರತರಾಗಿದ್ದ ವರ್ಗಗಳಾಗಿಯೇ ಉಳಿದು ಬಿಟ್ಟವು. ರಾಜಕೀಯ ಆರ್ಥಿಕ ಬದಲಾವಣೆ ಅವರಿಗೆ ಒಂದು ಮರೀಚಿಕೆಯಾಯಿತು. ಆದ ಕಾರಣ 1970ರ ದಶಕದ ತನಕ ಅವರು ರಾಜಕೀಯ ಚೌಕಟ್ಟಿನಲ್ಲಿ, ಆರ್ಥಿಕತೆ ಚೌಕಟ್ಟಿನಲ್ಲಿ ಪ್ರಬಲರಾಗಿ ಬೆಳೆಯಲೇ ಇಲ್ಲ.

ಇದೇ ಸಂದರ್ಭದಲ್ಲಿ ಭಾರತಾದ್ಯಂತ ಹಾಗೂ ಕರ್ನಾಟಕದಲ್ಲಿರುವ ಕೆಲವು ಜನಸಾಮಾನ್ಯ ಪರಿಕಲ್ಪನೆ ಕರಿತು ಹೇಳಬೇಕಾಗುತ್ತದೆ. ಅದು ಜಾತಿ ಕುರಿತಾಗಿರುವುದು. ಬಹಳ ಸಲ ಜಾತಿಯನ್ನು ಯಾವುದೇ ಪ್ರಭೇದಗಳಿಲ್ಲದೆ, ಸಣ್ಣ/ಉಪ ಜಾತಿಗಳಿಲ್ಲದ ಏಕರೂಪಿ ಸಾಮಾಜಿಕ ಚೌಕಟ್ಟಾಗಿ ಹಾಗೂ ಸಾಮಾಜಿಕ ಐಡೆಂಟಿಟಿ/ಅಸ್ಮಿತೆಯಾಗಿ ನೋಡುತ್ತೇವೆ. ಇದು ಅರ್ಧ ಸತ್ಯ. ಪ್ರತಿ ಜಾತಿಯೊಳಗೆ ನೂರಾರು ಸಣ್ಣ ಜಾತಿಗಳಿರುವುದು ವಾಸ್ತವ. ಇದು ಕರ್ನಾಟಕದ ಸಂದರ್ಭಕ್ಕೆ ಅನ್ವಯವಾಗುತ್ತದೆ. ಇದನ್ನು ಲಿಂಗಾಯತರು, ಒಕ್ಕಲಿಗರಲ್ಲಿ ಕೂಡಾ ನೋಡಬಹುದು. ಲಿಂಗಾಯತರಲ್ಲಿರುವ ಸಣ್ಣ ಜಾತಿಗಳೆಂದರೆ: ಜಂಗಮ, ಮಟಪತಿ, ಪಂಚಮಶಾಲಿ, ಕುಡುವಕ್ಕಲಿಗ, ಬಣಜಿಗ, ಗಾಣಿಗ, ಹುಗಾರ್, ಕುಂಭಾರ್, ಬಡಿಗಾರ್, ನವಲಿಗ(ಹಡಪದ್), ಮಡಿವಾಲ್. ಇದೇ ರೀತಿಯ ಸ್ಥಿತಿಯನ್ನು ಹಿಂದುಳಿದ ವರ್ಗಗಳಲ್ಲಿ ನೋಡಬಹುದು: ಕುಂಬಾರ, ಅಗಸ, ಬೇಡ, ನಾಯಿಂದ, ಈಡಿಗ ಒಂದು ಲೆಕ್ಕಾಚಾರದ ಪ್ರಕಾರ ಒಕ್ಕಲಿಗರಲ್ಲಿ ಕಡಿಮೆ ಎಂದರೂ 90ಕ್ಕೂ ಹೆಚ್ಚು ಸಣ್ಣ ಜಾತಿಗಳಿವೆ. ಕೆಲವೊಮ್ಮೆ ಗೋತ್ರ ಜಾತಿಗೆ ಸಮೀಕರಿಸಲಾಗುತ್ತದೆ. ಕೆಲವು ಕಡೆ ಜಾತಿಗಿಂತಲೂ ಹೆಚ್ಚು ಕುಲ ಮಹತ್ವವಾಗಿರುತ್ತದೆ. ಜಾತಿಗಳನ್ನು ಒಪ್ಪದ ಧರ್ಮಗಳಾದ ಮುಸ್ಲೀಮರಲ್ಲಿ ಹಾಗೂ ಕ್ರಿಶ್ಚಿಯನ್ನರಲ್ಲಿ ಜಾತಿಗಳಿವೆ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಅಲ್ಪಸಂಖ್ಯಾತರ ಆರ್ಥಿಕ ಸ್ಥಿತಿಗಳನ್ನು ಅಭ್ಯಸಿಸಲು ನೇಮಿಸಿದ ಸಾಚಾರ್ ವರದಿ ಪ್ರಕಾರ ಮುಸ್ಲಿಮರಲ್ಲಿ “ಜಾತಿ ತರಹ ಚೌಕಟ್ಟುಗಳಿವೆ” ಅವುಗಳೆಂದರೆ ಅಶ್ರಫ್, ಅರ್ಜಲ್ಸ್, ಅಝ್ರಲ್ಸ್. ಮೊದಲೆರಡು ಜಾತಿಗಳು ಮೇಲ್ಜಾತಿಯಿಂದ ಹಾಗೂ ಹಿಂದುಳಿದ ವರ್ಗಗಳಿಂದ ಐತಿಹಾಸಿಕವಾಗಿ ಮತಾಂತರಗೊಂಡರೆ, ಕೊನೆಯ ಜಾತಿಯಿಂದ ಬಂದವರು ಹೆಚ್ಚಿನವರು ದಲಿತರು. ಅವರಲ್ಲಿ ಪ್ರಮುಖ ಜಾತಿಗಳೆಂದರೆ ನಧಾಫ್, ದರ್ವೇಶಿ, ಜಲಗಾರ, ಕಸಬ್, ಕಸಯ್, ಸಿದ್ಧಿ, ಸಿಕ್ಕಲಗರ್, ಶಿಕ್ಕಲಿಗರ್, ನಳಬಂದ್, ಧೋಭಿ, ಫೂಲ್ ಮಾಲಿ, ಕುಂಬಾರ, ಚಪ್ಪರ್ ಬಂದ್, ಫೂಲಾರಿ, ಫೂಲಾನ್, ರಂಗ್ರೇಜ್. ವಾಸ್ತವವಾಗಿ ಕರ್ನಾಟಕದಲ್ಲಿ 1970ರ ದಶಕದಲ್ಲಿ ನೇಮಿಸಿದ ಹಾವನೂರು ಆಯೋಗ ಮುಸ್ಲಿಮರಲ್ಲಿ ಬಹಳಷ್ಟು ಜಾತಿಗಳನ್ನು ಗುರುತಿಸಿತ್ತು. ಇವುಗಳು ಮಂಡಲ್ ಆಯೋಗದ ಪಟ್ಟಿಯಲ್ಲೂ ಬಂದಿವೆ. ಕೆಲವು ಜಾತಿಗಳು ಈಗಲೂ ಪಟ್ಟಿಯೊಳಗೆ ಬಂದಿಲ್ಲ. ಮೂಲತಃವಾಗಿ ಇವುಗಳು ದಲಿತ ಸಮುದಾಯದಿಂದ ಮತಾಂತರಗೊಂಡ ಸಮುದಾಯಗಳು. ಕ್ರಿಶ್ಚಿಯನ್ನರಲ್ಲಿ ಇದೇ ರೀತಿ ದಲಿತ-ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಇತ್ಯಾದಿ ಜಾತಿಗಳಿರುವುದು ವಾಸ್ತವ.

ಈ ಸಣ್ಣ ಜಾತಿಗಳು ರಾಜಕಾರಣದ ಸಂದರ್ಭದಲ್ಲಿ ಸ್ವತಂತ್ರ ಅಸ್ಥಿತ್ವವನ್ನು ಕೆಲವೊಮ್ಮೆ ಪ್ರತಿಪಾದಿಸುತ್ತಿರುವುದು ವಾಸ್ತವ. ಚುನಾವಣಾ ರಾಜಕಾರಣದ ಸಂದರ್ಭದಲ್ಲಿ ಇದು ನಿಶ್ಚಲವಾಗಿ ಕಂಡುಬರುತ್ತದೆ. ಅದು ಟಿಕೇಟ್ ಹಂಚಿಕೆ, ಅಧಿಕಾರ ಹಂಚಿಕೆಯ ವಿಷಯವಾಗಿರಬಹುದು ಅಥವಾ ಪ್ರಾತಿನಿಧ್ಯತೆಯ ಪ್ರಶ್ನೆಯಾಗಿರಬಹುದು ಇವೆಲ್ಲಾ ಸಂದರ್ಭದಲ್ಲಿ ಸಣ್ಣ ಜಾತಿಗಳು ತಮ್ಮ ಅಸ್ಮಿತೆ/ಐಡೆಂಟಿಟಿಯನ್ನು ಉಳಿಸಿಕೊಳ್ಳಲು ರಾಜಕಾರಣ ಮಾಡುತ್ತದೆ. (ಮುಂದುವರಿಯುವುದು)

 

  

(ಮುಂದಿನ ಭಾಗದಲ್ಲಿ: ಸಾರ್ವಜನಿಕ ನೀತಿ, ಹೊಸ ಸಾಮಾಜಿಕ ಅಸ್ಮಿತೆ ಮತ್ತು ಅಧಿಕಾರ ರಾಜಕಾರಣ ಭಾಗ-2)

 

(ಲೇಖನ: ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಕೆಲವು ಚಿಂತನೆಗಳು (2017)ಪುಸ್ತಕದಿಂದ)

 

 

LEAVE A REPLY

Please enter your comment!
Please enter your name here